ಕಾರ್ಮಿಕ ಕಾನೂನು ಉಲ್ಲಂಘನೆ ಪ್ರಕರಣದಲ್ಲಿ ಬಾಂಗ್ಲಾದೇಶದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ದೋಷಿ
ಹೊಸದಿಲ್ಲಿ: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಬಾಂಗ್ಲಾದೇಶದ ಮುಹಮ್ಮದ್ ಯೂನುಸ್ ಅವರನ್ನು ದೇಶದ ಕಾರ್ಮಿಕ ಕಾನೂನು ಉಲ್ಲಂಘನೆ ಪ್ರಕರಣವೊಂದರಲ್ಲಿ ಇಂದು ದೋಷಿ ಎಂದು ಘೋಷಿಸಲಾಗಿದೆ.
“ಪ್ರೊಫೆಸರ್ ಯೂನುಸ್ ಮತ್ತು ಅವರ ಮೂವರು ಗ್ರಾಮೀಣ ಟೆಲಿಕಾಂ ಸಹೋದ್ಯೋಗಿಗಳನ್ನು ಕಾರ್ಮಿಕ ಕಾನೂನುಗಳನ್ವಯ ದೋಷಿಗಳೆಂದು ಘೋಷಿಸಿ ಆರು ತಿಂಗಳ ಸಜೆ ವಿಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಖುರ್ಷೀದ್ ಆಲಂ ಖಾನ್ ಹೇಳಿದ್ದಾರೆ.
ಎಲ್ಲಾ ನಾಲ್ಕು ಮಂದಿಗೆ ತಕ್ಷಣ ಜಾಮೀನು ನೀಡಲಾಗಿದೆ ಎಂದು ಅವರು ಹೇಳಿದರು.
ಯೂನುಸ್ ವಿರುದ್ಧದ ಪ್ರಕರಣವನ್ನು ರಾಜಕೀಯ ಪ್ರೇರಿತವೆಂದೇ ತಿಳಿಯಲಾಗಿದೆ. ತಮ್ಮ ಮೈಕ್ರೋ ಫೈನಾನ್ಸ್ ಬ್ಯಾಂಕ್ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲೆತ್ತಿದ ಶ್ರೇಯವನ್ನು ಯೂನುಸ್ ಪಡೆದಿದ್ದಾರೆ. ಅದೇ ಸಮಯ ದೇಶದ ಪ್ರಧಾನಿ ಶೇಖ್ ಹಸೀನಾ ಅವರು ಯೂನುಸ್ ಅವರೊಂದಿಗೆ ದೀರ್ಘ ಕಾಲದ ಹಗೆತನ ಹೊಂದಿದ್ದಾರೆ. ಯೂನುಸ್ ಅವರು ಬಡವರ ರಕ್ತ ಹೀರುತ್ತಿದ್ದಾರೆಂಬ ಆರೋಪವನ್ನು ಶೇಖ್ ಹಸೀನಾ ಹೊರಿಸಿದ್ದಾರೆ.
2006ರ ನೊಬೆಲ್ ಪ್ರಶಸ್ತಿ ವಿಜೇತರಾಗಿರುವ ಯೂನುಸ್ ವಿರುದ್ಧ ಹಸೀನಾ ಸರಣಿ ಆರೋಪಗಳನ್ನೂ ಮಾಡಿದ್ದಾರೆ. ಒಂದು ಕಾಲದಲ್ಲಿ ಯೂನುಸ್ ಅವರು ಹಸೀನಾ ಅವರ ರಾಜಕೀಯ ಎದುರಾಳಿ ಎಂದೇ ತಿಳಿಯಲ್ಪಟ್ಟವರಾಗಿದ್ದರು.
ವಿಪಕ್ಷಗಳ ಬಹಿಷ್ಕಾರದ ನಂತರ ಮುಂದಿನ ವಾರ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಐದನೇ ಬಾರಿಗೆ ಅಧಿಕಾರದ ಗದ್ದುಗೆಗೇರುವ ನಿರೀಕ್ಷೆಯಿದೆ.
ಯೂನುಸ್ ತಮ್ಮ ಗ್ರಾಮೀನ್ ಟೆಲಿಕಾಂನಲ್ಲಿ ಕಾರ್ಮಿಕರ ಕಲ್ಯಾಣ ನಿಧಿ ಸ್ಥಾಪಿಸಲು ವಿಫಲರಾಗಿದ್ದಾರೆಂಬ ಆರೋಪ ಎದುರಿಸುತ್ತಿದ್ದಾರೆ. ಆದರೆ ನಾಲ್ಕು ಮಂದಿಯೂ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ.
ಯೂನುಸ್ ಅವರ ಕೆಲಸಕ್ಕೆ ರಾಜಕೀಯ ಪ್ರತೀಕಾರದ ಕ್ರಮವಾಗಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ, ಕಾರ್ಮಿಕ ಕಾನೂನುಗಳನ್ನು ಅಸ್ತ್ರವನ್ನಾಗಿಸಲಾಗುತ್ತಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಈ ಹಿಂದೆ ಸರ್ಕಾರದ ವಿರುದ್ಧ ಆರೋಪ ಹೊರಿಸಿತ್ತು.