ಲಾಠಿಯಲ್ಲಿ ಜನರ ಪೃಷ್ಠಕ್ಕೆ ಥಳಿಸುವುದು ಕಿರುಕುಳವಲ್ಲ: ಗುಜರಾತ್ ಹೈಕೋರ್ಟ್ ಗೆ ತಿಳಿಸಿದ ಪೊಲೀಸರು

ಬಂಧನದ ಸಂದರ್ಭದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ನಾಲ್ವರು ಗುಜರಾತ್ ಪೊಲೀಸರು, ಜನರ ಪೃಷ್ಠಕ್ಕೆ ಥಳಿಸುವುದು ಕಸ್ಟಡಿ ಕಿರುಕುಳವಾಗುವುದಿಲ್ಲ

Update: 2023-10-12 12:23 GMT

PHOTO : PTI

ಹೊಸದಿಲ್ಲಿ: ಬಂಧನದ ಸಂದರ್ಭದಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪ ಎದುರಿಸುತ್ತಿರುವ ನಾಲ್ವರು ಗುಜರಾತ್ ಪೊಲೀಸರು, ಜನರ ಪೃಷ್ಠಕ್ಕೆ ಥಳಿಸುವುದು ಕಸ್ಟಡಿ ಕಿರುಕುಳವಾಗುವುದಿಲ್ಲ ಎಂದು ಗುಜರಾತ್ ಹೈಕೋರ್ಟ್ ಎದುರು ಪ್ರತಿಪಾದಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 4ರಂದು ಮೂವರು ಮುಸ್ಲಿಂ ವ್ಯಕ್ತಿಗಳನ್ನು ಬಂಧಿಸಿದ ಸಂದರ್ಭದಲ್ಲಿ ಅವರನ್ನು ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಥಳಿಸಿದ ಆರೋಪವನ್ನು ಈ ಪೊಲೀಸರು ಎದುರಿಸುತ್ತಿದ್ದಾರೆ. ಬಂಧಿತ ವ್ಯಕ್ತಿಗಳು ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯ ಉಂಧೇಲಾ ಗ್ರಾಮದಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಲಾಗಿದ್ದ ಗಾರ್ಬಾ ಕಾರ್ಯಕ್ರಮಕ್ಕೂ ಮುನ್ನಾ ದಿನ ಕಲ್ಲು ತೂರಿದ ಆರೋಪವನ್ನು ಎದುರಿಸುತ್ತಿದ್ದಾರೆ. ಕಳೆದ ವಾರ ಈ ವಿಷಯವು ನ್ಯಾಯಾಲಯವನ್ನು ತಲುಪಿದಾಗ, ಲೋಪವೆಸಗಿರುವ ಪೊಲೀಸ್ ಅಧಿಕಾರಿಗಳು ಡಿ.ಕೆ.ಬಸು vs ಪಶ್ಚಿಮ ಬಂಗಾಳ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಾಲಯವು ಅವರ ವಿರುದ್ಧದ ದೋಷಾರೋಪವನ್ನು ನಿಗದಿಗೊಳಿಸಿತ್ತು. ಈ ನಿರ್ದಿಷ್ಟ ಪ್ರಕರಣವು ಬಂಧನ ಹಾಗೂ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪೊಲೀಸರು ವರ್ತಿಸಬೇಕಾದ ರೀತಿಯ ಕುರಿತ ನಿಯಮಗಳು ರೂಪುಗೊಳ್ಳಲು ಕಾರಣವಾಗಿತ್ತು.

Hindustan Times ಪ್ರಕಾರ, “ಮೂರರಿಂದ ಆರು ಬಾರಿ ಅರ್ಜಿದಾರರ ಪೃಷ್ಠಕ್ಕೆ ಥಳಿಸುವುದು ಅಸೂಕ್ತ ಹಾಗೂ ಅಸ್ವೀಕಾರಾರ್ಹವಾದರೂ, ನ್ಯಾಯಾಲಯ ನಿಂದನೆಯ ಆರೋಪದಲ್ಲಿ ಎರಡನೆ ಪ್ರತಿವಾದಿ (ಎ.ವಿ.ಪಾರ್ಮರ್) ಅವರನ್ನು ಕಸ್ಟಡಿ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಿಸಲು ಅರ್ಹವಾಗುವುದಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ನ್ಯಾಯಾಲಯದೆದುರು ವಾದಿಸಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸ್ ಇನ್ಸ್ ಪೆಕ್ಟರ್ ಎ.ವಿ.ಪಾರ್ಮರ್ ಅಲ್ಲದೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಡಿ.ಬಿ.ಕುಮಾವತ್, ಮುಖ್ಯ ಪೊಲೀಸ್ ಪೇದೆ ಕೆ.ಎಲ್.ದಭಿ ಹಾಗೂ ಪೊಲೀಸ್ ಪೇದೆ ರಾಜು ದಭಿ ಈ ಪ್ರಕರಣದಲ್ಲಿನ ಆರೋಪಿಗಳಾಗಿದ್ದು, ತಮ್ಮ ವಿರುದ್ಧ ನಿಗದಿಯಾಗಿರುವ ದೋಷಾರೋಪಕ್ಕೆ ಪ್ರತಿಯಾಗಿ ಸಂತ್ರಸ್ತರಿಗೆ ಪರಿಹಾರ ನೀಡಲು ತಮಗೆ ಅವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News