ಬಂಗಾಳ ಸಿಎಂ ಕ್ರಮ ತೃಪ್ತಿ ತಂದಿಲ್ಲ: ಕೊಲ್ಕತ್ತಾ ಅತ್ಯಾಚಾರ ಸಂತ್ರಸ್ತೆ ವೈದ್ಯೆಯ ತಂದೆ

Update: 2024-08-19 03:00 GMT

ಕೊಲ್ಕತ್ತಾ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ವಿರುದ್ಧ ದೇಶವ್ಯಾಪಿ ನಡಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ ಯುವತಿ (PC: x.com/vanathadup58590)

ಕೊಲ್ಕತ್ತಾ: ಪುತ್ರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸುವ "ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ" ಖಂಡನೀಯ ಎಂದು ಕೊಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯ ತಂದೆ ಹೇಳಿದ್ದಾರೆ. ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಕ್ರಮ ಸಮಾಧಾನ ತಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಸಿಎಂ ನ್ಯಾಯ ಒದಗಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಹಾಗೂ ಬೆಂಬಲಾರ್ಥವಾಗಿ ಬೀದಿಗೂ ಇಳಿಯುವುದಾಗಿ ಹೇಳುತ್ತಿದ್ದಾರೆ. ಆದರೆ ನ್ಯಾಯಕ್ಕಾಗಿ ಹೋರಾಡುವ ಜನಸಾಮಾನ್ಯರನ್ನು ಏಕೆ ಜೈಲಿಗೆ ತಳ್ಳಲಾಗುತ್ತಿದೆ" ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯ ಸರ್ಕಾರ ನೀಡಲು ಮುಂದಾಗಿರುವ ಪರಿಹಾರವನ್ನು ನಾವು ಸ್ವೀಕರಿಸಲು ನಿರಾಕರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಟಾಪ್ಸಿ ಬಳಿಕ ತಕ್ಷಣವೇ ಪುತ್ರಿಯ ಅಂತ್ಯಕ್ರಿಯೆ ನಡೆಸಿದ್ದನ್ನು ನೋಡಿದರೆ, ಸಾಕ್ಷ್ಯ ನಾಶಪಡಿಸುವ ಪ್ರಯತ್ನ ನಡೆದಿದೆಯೇ ಎಂಬ ಅನುಮಾನ ಮೂಡಲು ಆರಂಭಿಸಿದೆ ಎಂದು ಅವರು ಹೇಳಿದ್ದಾರೆ. "ಸ್ಮಶಾನದಲ್ಲಿ ಮೂರು ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕಾಯಲಾಗುತ್ತಿತ್ತು. ಆದರೆ ಅದಕ್ಕೂ ಮುನ್ನ ನನ್ನ ಪುತ್ರಿಯ ಅಂತ್ಯಸಂಸ್ಕಾರ ನಡೆಸಲಾಯಿತು. ಇದು ನಮಗೆ ಆಘಾತ ತಂದಿದೆ ಮತ್ತು ನಮ್ಮ ಏಕೈಕ ಪುತ್ರಿಯನ್ನು ಕಳೆದುಕೊಂಡ ಆ ಸಂದರ್ಭದಲ್ಲಿ ನಾವು ಏನನ್ನೂ ಯೋಚಿಸುವ ಅಥವಾ ಕ್ರಮ ಕೈಗೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಂಕಟ ಹಂಚಿಕೊಂಡರು.

ಕೊಲ್ಕತ್ತಾ ಹೈಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಳ್ಳುವ ಮುನ್ನ ಪೊಲೀಸರು ನಡೆಸಿದ ವಿಚಾರಣೆಯ ಸ್ವರೂಪವನ್ನು ಕೂಡಾ ಅವರು ಪ್ರಶ್ನಿಸಿದರು.

"ವಿಚಾರಣೆಯಲ್ಲಿ ಏನೂ ಹೊರಬಿದ್ದಿಲ್ಲ. ಎದೆ ಚಿಕಿತ್ಸೆ ವಿಭಾಗದಿಂದ ಅಥವಾ ಕಾಲೇಜಿನ ಯಾರಿಂದಲೂ ನಮಗೆ ಸಹಕಾರ ಸಿಕ್ಕಿಲ್ಲ. ನನ್ನ ಪುತ್ರಿಯ ಹತ್ಯೆಗೆ ಇಡೀ ವಿಭಾಗ ಹೊಣೆ. ಈ ಅಪರಾಧದಲ್ಲಿ ವಿಭಾಗದ ಕೆಲವರು ಕೂಡಾ ಶಾಮೀಲಾಗಿರುವ ಸಂದೇಹ ಇದೆ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News