15ಕ್ಕೂ ಹೆಚ್ಚು ವಾಹನಗಳಿಗೆ ಢಿಕ್ಕಿಯಾದ 'ಬೆಸ್ಟ್' ಬಸ್: 4 ಮಂದಿ ಮೃತ್ಯು

Update: 2024-12-10 02:20 GMT

ಹೌಸಿಂಗ್ ಕಾಲೋನಿಯೊಂದಕ್ಕೆ ನುಗ್ಗಿ ನಿಂತಿರುವ ಬಸ್‌ PC: x.com/timesofindia

ಮುಂಬೈ: ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಅಂಡ್ ಟ್ರಾನ್ಸ್ಪೋರ್ಟ್ (ಬೆಸ್ಟ್) ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಐದಾರು ಆಟೊರಿಕ್ಷಾ, 10ಕ್ಕೂ ಹೆಚ್ಚು ದ್ವಿಚಕ್ರ ವಾಹನ ಮತ್ತು 10ಕ್ಕೂ ಹೆಚ್ಚು ಪಾದಚಾರಿಗಳಿಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ನಾಲ್ಕು ಮಂದಿ ಮೃತಪಟ್ಟು 29ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಸೇರಿದ್ದು, ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಸೋಮವಾರ ರಾತ್ರಿ 9.30ರ ವೇಳೆಗೆ ಮುಂಬೈನ ಪಶ್ಚಿಮ ಕುರ್ಲಾದಲ್ಲಿರುವ ಎಸ್.ಜಿ.ಬರ್ವೆ ರಸ್ತೆಯಲ್ಲಿ ಘಟನೆ ನಡೆದಿದ್ದು, ಮೃತರ ಸಂಖ್ಯೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ. ಅಂತಿಮವಾಗಿ ಬಸ್ಸು ಹೌಸಿಂಗ್ ಕಾಲೋನಿಯೊಂದಕ್ಕೆ ನುಗ್ಗಿ ನಿಂತಿತು ಎಂದು ಹೇಳಲಾಗಿದೆ.

ಬಸ್ಸಿನ ಬ್ರೇಕ್ ನಿಷ್ಕ್ರಿಯವಾದದ್ದು ದುರಂತಕ್ಕೆ ಕಾರಣ ಎನ್ನಲಾಗಿದ್ದು, ಚಾಲಕ ಸಂಜಯ್ ಮೋರೆ (43) ಎಂಬಾತನನ್ನು ಬಂಧಿಸಲಾಗಿದೆ. ಈ ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಉಗ್ರರ ದಾಳಿಯನ್ನು ಹೋಲುತ್ತಿತ್ತು ಎಂದು ಕೆಲ ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಜನ ಗುಂಪು ಸೇರಿ ಉದ್ವಿಗ್ನಸ್ಥಿತಿ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತ್ವರಿತ ಸ್ಪಂದನೆ ಪಡೆ ಮತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಗಳನ್ನು ನಿಯೋಜಿಸಲಾಯಿತು.

ಬಸ್ಸನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾಹನದ ತಪಾಸಣೆಗಾಗಿ ಆರ್ ಟಿಓ ತಜ್ಞರು ಮತ್ತು ಬೆಸ್ಟ್ ಎಂಜಿನಿಯರ್ ಗಳನ್ನು ಕರೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಬಸ್ಸು ಎಲೆಕ್ಟ್ರಿಕ್ ಎಜಿ ವೆಟ್ ಲೀಸ್ ಬಸ್ ಆಗಿದ್ದು, ಖಾಸಗಿ ಗುತ್ತಿಗೆದಾರರು ನೇಮಕ ಮಾಡಿಕೊಂಡ ಚಾಲಕ ಬಸ್ಸನ್ನು ಚಲಾಯಿಸುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಮೃತರನ್ನು ಶಿವಂ ಕಶ್ಯಪ್ (18), ಕನೀಝ್ ಫಾತಿಮಾ (55),ಮಹಫಿಲ್ ಶಾ (10) ಮತ್ತು ಅನಮ್ ಶೇಕ್ (20) ಎಂದು ಗುರುತಿಸಲಾಗಿದೆ. 332 ಮಾರ್ಗಸಂಖ್ಯೆಯ ಈ ಬಸ್ ಕುರ್ಲಾ ಮತ್ತು ಅಂಧೇರಿ ನಡುವೆ ಸಂಚರಿಸುತ್ತಿತ್ತು. ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಚಾಲಕನ ನಿರ್ಲಕ್ಷ್ಯ ಕಾರಣವೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸತ್ಯನಾರಾಯಣ ಚೌಧರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News