ಭಾರತ ಜೋಡೊ ನ್ಯಾಯ ಯಾತ್ರೆ | ಉತ್ತರ ಪ್ರದೇಶದಲ್ಲಿ ಕೊನೆಯ ಹಂತದಲ್ಲಿ ಯಾತ್ರೆಯನ್ನು ಸೇರಿದ ಪ್ರಿಯಾಂಕಾ ಗಾಂಧಿ
ಲಕ್ನೋ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯು ಶನಿವಾರ ಉತ್ತರ ಪ್ರದೇಶದ ಮೊರಾದಾಬಾದ್ನಿಂದ ಪುನರಾರಂಭಗೊಂಡಿತು. ಇದು ರಾಜ್ಯದಲ್ಲಿ ಯಾತ್ರೆಯ ಕೊನೆಯ ಹಂತವಾಗಿದ್ದು, ಶನಿವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋದರ ರಾಹುಲ್ ಅವರನ್ನು ಸೇರಿಕೊಂಡರು.
ರವಿವಾರ ಫತೇಪುರ ಸಿಕ್ರಿಯಲ್ಲಿ ರಾಜ್ಯದಲ್ಲಿ ಯಾತ್ರೆಯು ಅಂತ್ಯಗೊಳ್ಳಲಿದ್ದು, ಅಲ್ಲಿಯವರೆಗೆ ಪ್ರಿಯಾಂಕಾ ಗಾಂಧಿ ರಾಹುಲ್ ಜೊತೆಯಲ್ಲಿರುತ್ತಾರೆ ಎಂದು ಕಾಂಗ್ರೆಸ್ ತಿಳಿಸಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ರವಿವಾರ ಆಗ್ರಾದಲ್ಲಿ ಯಾತ್ರೆಯನ್ನು ಕೂಡಿಕೊಳ್ಳಲಿದ್ದಾರೆ.
ಯಾತ್ರೆಯು ಚಂದೌಲಿಯಲ್ಲಿ ಉತ್ತರ ಪ್ರದೇಶವನ್ನು ಪ್ರವೇಶಿಸಿದಾಗ ಪ್ರಿಯಾಂಕಾ ಅದರಲ್ಲಿ ಭಾಗಿಯಾಗಲಿದ್ದರು, ಆದರೆ ಅನಾರೋಗ್ಯದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಯಾತ್ರೆಯು ರವಿವಾರ ರಾತ್ರಿ ರಾಜಸ್ಥಾನದ ಧೋಲಪುರದಲ್ಲಿ ತಂಗಲಿದೆ.
ರಾಹುಲ್ ಫೆ.27 ಮತ್ತು 28ರಂದು ತಾನು ಓದಿದ್ದ ಬ್ರಿಟನ್ ನ ಕ್ಯಾಂಬ್ರಿಡ್ಜ್ ವಿವಿಯಲ್ಲಿ ಎರಡು ವಿಶೇಷ ಉಪನ್ಯಾಸಗಳನ್ನು ನೀಡಲಿದ್ದಾರೆ. ಹೀಗಾಗಿ ಫೆ.26ರಿಂದ ಮಾ.1ರವರೆಗೆ ಯಾತ್ರೆಯು ವಿರಾಮವನ್ನು ಪಡೆದುಕೊಳ್ಳಲಿದೆ. ಈ ಅವಧಿಯಲ್ಲಿ ರಾಹುಲ್ ದಿಲ್ಲಿಯಲ್ಲಿ ಮಹತ್ವದ ಸಭೆಗಳಲ್ಲಿಯೂ ಭಾಗವಹಿಸಲಿದ್ದಾರೆ.
ಮಾ.2ರಂದು ಧೋಲಪುರದಿಂದ ಪುನರಾರಂಭಗೊಳ್ಳುವ ಯಾತ್ರೆಯು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.