ಭದ್ರತಾ ವೈಫಲ್ಯ: ಸಂಸತ್ ಪ್ರವೇಶಿಸುವವರನ್ನು ಪರೀಕ್ಷಿಸುವ ಜವಾಬ್ದಾರಿ ಸಿಐಎಸ್‌ಎಫ್‌ಗೆ
ಹೊಸದಿಲ್ಲಿ: ಸಂಸತ್ ಭವನ ಭದ್ರತಾ ವೈಫಲ್ಯ ಬಳಿಕ ಸಂಸತ್ತಿನ ಸಂಕೀರ್ಣ ಪ್ರವೇಶಿಸುವವರನ್ನು ಪರಿಶೀಲನೆ ಮಾಡುವ ಹಾಗೂ ಭದ್ರತೆ ಒದಗಿಸುವ ಜವಾಬ್ದಾರಿಯನ್ನು ದಿಲ್ಲಿ ಪೊಲೀಸರಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರ ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಸಿಐಎಸ್ಎಫ್ ದಿಲ್ಲಿ ಪೊಲೀಸರಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದು, ಭದ್ರತೆಯ ಉಸ್ತುವಾರಿ ಏಜೆನ್ಸಿಯಾಗಿ, ಸಂಸತ್ತಿಗೆ ಪ್ರವೇಶಿಸುವವರನ್ನು ಪರೀಕ್ಷಿಸುವುದು ಸೇರಿದಂತೆ ಎಲ್ಲಾ ಸಂಬಂಧಿತ ಜವಾಬ್ದಾರಿಗಳನ್ನು ಸಿಐಎಸ್ಎಫ್ ನಿರ್ವಹಿಸಲಿದೆ.
ಸಂಕೀರ್ಣದೊಳಗಿನ ಭದ್ರತೆಯು ಲೋಕಸಭೆಯ ಸಚಿವಾಲಯದ ಜವಾಬ್ದಾರಿಯಲ್ಲಿಯೇ ಮುಂದುವರಿಯುತ್ತದೆ.
ಸಂಸತ್ತು, ಆಂತರಿಕ ಮತ್ತು ಹೊರಾಂಗಣಗಳ ವಿವರವಾದ ಭದ್ರತಾ ಸಮೀಕ್ಷೆಯ ನಂತರ ಈ ಬದಲಾವಣೆಯನ್ನು ಜಾರಿಗೊಳಿಸಲಾಗುವುದು.
ಡಿಸೆಂಬರ್ 13 ರಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಿಂದ ನೀಡಿದ ಪಾಸ್‌ಗಳ ಮೂಲಕ ಇಬ್ಬರು ವ್ಯಕ್ತಿಗಳು ಲೋಕಸಭೆಯ ಸಂದರ್ಶಕರ ಗ್ಯಾಲರಿಗೆ ಪ್ರವೇಶ ಪಡೆದು, ಅಲ್ಲಿಂದ ಚೇಂಬರ್‌ನೊಳಗೆ ಹಳದಿ ಕಲರ್ ಸ್ಮೋಕ್ ಸಿಡಿಸಿ ಆತಂಕ ಸೃಷ್ಟಿಸಿದ್ದರು.