ಬಿಹಾರ | ದೇವಸ್ಥಾನದ ವಿಗ್ರಹಗಳ ಧ್ವಂಸ ; ಓರ್ವನ ಬಂಧನ
ಪಾಟ್ನಾ : ಬಿಹಾರದ ಬಾಗಲ್ಪುರ ಜಿಲ್ಲೆಯ ದೇವಾಲಯವೊಂದರ ವಿಗ್ರಹಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಘಟನೆ ವಿರುದ್ಧ ಸ್ಥಳೀಯರು ರವಿವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸನಹೌಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ದೇವಾಲಯದಲ್ಲಿ ಶನಿವಾರ ರಾತ್ರಿ ನಡೆದಿದೆ. ಘಟನೆಯನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿರುವುದರಿಂದ ಹಾಗೂ ರಸ್ತೆಗಳಲ್ಲಿ ಟಯರ್ ಗಳನ್ನು ಉರಿಸಿರುವುದರಿಂದ ಭದ್ರತಾ ಪಡೆ ಧ್ವಜ ಮೆರವಣಿಗೆ ನಡೆಸಿದೆ.
‘‘ದೇವಾಲಯದಲ್ಲಿದ್ದ ವಿಗ್ರಹಗಳನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಈ ಘಟನೆಯನ್ನು ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತರಲಾಗಿದೆ’’ ಎಂದು ಜಿಲ್ಲಾ ಪೊಲೀಸರು ರವಿವಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಘಟನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಲು ರವಿವಾರ ಬೆಳಗ್ಗೆ ಸನಹೌಲಾ ಪೊಲೀಸ್ ಠಾಣೆಯ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅವರು ರಸ್ತೆಗಳನ್ನು ತಡೆದು ಹಾಗೂ ಟಯರ್ಗಳನ್ನು ಉರಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
‘‘ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಈ ಪ್ರದೇಶದಲ್ಲಿ ಭದ್ರತಾ ಪಡೆ ಧ್ವಜ ಮೆರವಣಿಗೆ ನಡೆಸಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾವು ಜನರಲ್ಲಿ ಮನವಿ ಮಾಡಿದ್ದೇವೆ’’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.