ಬಿಹಾರದಲ್ಲಿ ಮರುಕಳಿಸಿದ ಅನೈತಿಕ ಪೊಲೀಸ್ ಗಿರಿ | ಬೆಟ್ಟದ ಮೇಲೆ ಒಟ್ಟಿಗೆ ಕುಳಿತಿದ್ದ ಜೋಡಿಯ ಮೇಲೆ ದುಷ್ಕರ್ಮಿಗಳ ಹಲ್ಲೆ
ಪಾಟ್ನಾ : ಬಿಹಾರದಲ್ಲಿ ಅನೈತಿಕ ಪೊಲೀಸ್ ಗಿರಿ ಮರುಕಳಿಸಿದ್ದು, ಬೆಟ್ಟದ ಮೇಲೆ ಏಕಾಂತವಾಗಿ ಕುಳಿತು ಸಂಭಾಷಿಸುತ್ತಿದ್ದ ಜೋಡಿಯ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಜಮುಯಿ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೌಲತ್ ಪುರ್ ನಲ್ಲಿ ನಡೆದಿದೆ. ಈ ಘಟನೆ ಒಂದು ವಾರದ ಹಿಂದೆ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಇದರ ವಿಡಿಯೊ ವೈರಲ್ ಆಗಿದೆ.
ಜೋಡಿಗಳು ಬೆಟ್ಟದ ಮೇಲೆ ಏಕಾಂತವಾಗಿ ಕುಳಿತು ಸಂಭಾಷಿಸುತ್ತಿರುವಾಗ, ಅಲ್ಲಿಗೆ ಬಂದಿರುವ ದುಷ್ಕರ್ಮಿಗಳ ಗುಂಪೊಂದು, ಅವರನ್ನು ಅವಾಚ್ಯವಾಗಿ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದೆ. ಈ ಕೃತ್ಯದಿಂದ ಕಂಗಾಲಾಗಿರುವ ಜೋಡಿಗಳು ಕ್ಷಮೆಗಾಗಿ ಬೇಡಿಕೊಂಡರೂ ಮರುಗದ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಹಲ್ಲೆಗೀಡಾದ ಜೋಡಿಗಳ ಪೈಕಿ ಯುವತಿಯು ಉಝಾಂಡಿ ಪ್ರದೇಶದ ನಿವಾಸಿಯಾಗಿದ್ದರೆ, ಯುವಕನು ಬಧ್ವಾನ್ ತಾಲಾಬ್ ನಿವಾಸಿ ಎಂದು ಹೇಳಲಾಗಿದೆ.
ವಯಸ್ಕರಾದ ಇಬ್ಬರೂ ನಿರ್ಜನ ಪ್ರದೇಶದಲ್ಲಿ ಭೇಟಿಯಾಗುತ್ತಿದ್ದರು ಎನ್ನಲಾಗಿದ್ದು, ಇದನ್ನು ಗಮನಿಸಿರುವ ಗ್ರಾಮಸ್ಥರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಹಲ್ಲೆಯ ನಂತರ, ಗ್ರಾಮಸ್ಥರು ಅವರಿಬ್ಬರಿಗೂ ಬಲವಂತವಾಗಿ ಮದುವೆ ಮಾಡಿಸಿದರು ಎಂದೂ ಹೇಳಲಾಗಿದೆ. ಆದರೆ ಈ ಬಗ್ಗೆ ಖಚಿತ ಮಾಹಿತಿಯಿಲ್ಲ.
ಈ ಘಟನೆ ನಡೆದು ಒಂದು ವಾರವಾಗಿದ್ದು, ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದರೂ, ಸ್ಥಳೀಯ ಪೊಲೀಸರಿಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ಜೋಡಿಗಳೂ ದೂರು ದಾಖಲಿಸಿಲ್ಲ ಎಂದು ವರದಿಯಾಗಿದೆ.