ಬೈಡನ್ ಪ್ರಧಾನಿ ದ್ವಿಪಕ್ಷೀಯ ಮಾತುಕತೆ
ಹೊಸದಿಲ್ಲಿ: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಹೊಸದಿಲ್ಲಿಗೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ಪ್ರಧಾನಿಯವರ ಅಧಿಕೃತ ನಿವಾಸ ನಂ.7 ಲೋಕಕಲ್ಯಾಣ ಮಾರ್ಗ್ ನಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದರು.
‘‘ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು 7, ಲೋಕಕಲ್ಯಾಣ ಮಾರ್ಗ್ ನಲ್ಲಿ ಸ್ವಾಗತಿಸಲು ಸಂತಸವಾಗುತ್ತಿದೆ. ನಮ್ಮ ಮಾತುಕತೆ ರಚನಾತ್ಮಕವಾಗಿತ್ತು. ಭಾರತ ಹಾಗೂ ಅಮೆರಿಕ ನಡುವೆ ಆರ್ಥಿಕ ಹಾಗೂ ಪ್ರಜಾ ಬಾಂಧವ್ಯಗಳನ್ನು ಅಭಿವೃದ್ಧಿಪಡಿಸುವುದು. ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ನಾವು ಶಕ್ತರಾಗಿದ್ದೇವೆ. ನಮ್ಮ ದೇಶಗಳ ನಡುವಿನ ಮೈತ್ರಿಯು ಜಾಗತಿಕ ಒಳಿತಿನಲ್ಲಿ ಪ್ರಗತಿಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಲಿವೆ’’ ಎಂದು ಪ್ರಧಾನಿಯವರು ಮಾತುಕತೆಯ ಬಳಿಕ ಸಾಮಾಜಿಕ ಜಾಲತಾಣ ಎಕ್ಸ್ (ಹಿಂದಿನ ಟ್ವಿಟ್ಟರ್)ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾತುಕತೆಯ ವೇಳೆ ಅಮೆರಿಕದ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲ್ಲೆನ್, ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹಾಗೂ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸಭೆಯಲ್ಲಿ ಉಪಸ್ಥಿತರಿದ್ದರು. ಭಾರತದ ನಿಯೋಗದಲ್ಲಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತಿತರರಿದ್ದರು.