ಬಿಲ್ಕಿಸ್ ಬಾನೊ ಪ್ರಕರಣ | ಗುಜರಾತ್ ಸರಕಾರದ ವಿರುದ್ಧ ತನ್ನ ಟೀಕೆಯನ್ನು ಕೈಬಿಡಲು ನಿರಾಕರಿಸಿದ ಸುಪ್ರೀಂಕೋರ್ಟ್

Update: 2024-09-26 16:55 GMT

ಬಿಲ್ಕಿಸ್ ಬಾನೊ , ಸುಪ್ರೀಂಕೋರ್ಟ್ | PTI

ಹೊಸದಿಲ್ಲಿ : ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳ ಬಿಡುಗಡೆಗೆ ಸಂಬಂಧಿಸಿ ರಾಜ್ಯ ಸರಕಾರವು ಹೊರಡಿಸಿದ ಆದೇಶದ ಕುರಿತು ತಾನು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ತೆಗೆದುಹಾಕಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. ಸರ್ವೋಚ್ಛ ನ್ಯಾಯಾಲಯದ ಈ ನಡೆಯಿಂದಾಗಿ ಗುಜರಾತ್ ಸರಕಾರಕ್ಕೆ ದೊಡ್ಡ ಮುಖಭಂಗವಾದಂತಾಗಿದೆ.

2002ರ ಗುಜರಾತ್ ಗಭೆ ಸಂದರ್ಭ ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕುಟುಂಬದ ಏಳು ಮಂದಿ ಸದಸ್ಯರನ್ನು ಹತ್ಯೆಗೈದ ಪ್ರಕರಣದ 11 ಮಂದಿ ದೋಷಿಗಳನ್ನು ಗುಜರಾತ್ ಸರಕಾರವು ಅವಧಿಗೆ ಮುನ್ನ ಬಿಡುಗಡೆಗೊಳಿಸಿರುವುದನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಈ ಬಗ್ಗೆ ನೀಡಿದ ಆದೇಶದಲ್ಲಿ ಸುಪ್ರೀಂಕೋರ್ಟ್ ತನ್ನ ವಿರುದ್ಧ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ತೆಗೆದುಹಾಕಬೇಕೆಂದು ಗುಜರಾತ್ ಸರಕಾರವು ಮನವಿ ಮಾಡಿತ್ತು.

ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳ ಜೊತೆ ಗುಜರಾತ್ ಸರಕಾರವು ಕೈಜೋಡಿಸಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಿಸಿದ್ದಕ್ಕೆ ಗುಜರಾತ್ ಸರಕಾರವು ಆಕ್ಷೇಪ ವ್ಯಕ್ತಪಡಿಸಿತ್ತು. ಸರ್ವೋಚ್ಛ ನ್ಯಾಯಾಲಯದ ಈ ಅನಿಸಿಕೆಯು ಅಸಮಂಜಸವಾದುದು ಹಾಗೂ ಪಕ್ಷಪಾತದಿಂದ ಕೂಡಿದ್ದಾಗಿದೆಯೆಂದು ರಾಜ್ಯ ಸರಕಾರವು ಅರ್ಜಿಯಲ್ಲಿ ತಿಳಿಸಿತ್ತು.

ಆದರೆ ಗುಜರಾತ್ ಸರಕಾರದ ಈ ವಾದವನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ನ್ಯಾಯಮೂರ್ತಿ ಉಜ್ಜಲ್ ಭುವನ್ ತಿರಸ್ಕರಿಸಿದ್ದಾರೆ.

ಬಂಧನದಲ್ಲಿ ಸನ್ನಡತೆಯನ್ನು ತೋರಿದ್ದಾರೆಂಬ ಕಾರಣ ನೀಡಿ ಗುಜರಾತ್ ಸರಕಾರವು ಬಿಡುಗಡೆಗೊಳಿಸಿದ್ದ ಬಿಲ್ಕಿಸ್ ಬಾನೊ ಪ್ರಕರಣದ 11 ಮಂದಿ ಆರೋಪಿಗಳು ಜೈಲಿಗೆ ಮರಳುವಂತೆ ಸುಪ್ರೀಂಕೋರ್ಟ್ ಜನವರಿಯಲ್ಲಿ ಆದೇಶ ನೀಡಿತ್ತು. ಬಿಲ್ಕಿಸ್ ಬಾನೊ ಪ್ರಕರಣದ ದೋಷಿಗಳನ್ನು ಗುಜರಾತ್ ಸರಕಾರವು ಬಿಡುಗಡೆಗೊಳಿಸಲು ಸಾಧ್ಯವಿಲ್ಲವೆಂದು ಸರ್ವೋಚ್ಛ ನ್ಯಾಯಾಲಯ ತನ್ನ ಐತಿಹಾಸಿಕ ಆದೇಶದಲ್ಲಿ ತಿಳಿಸಿತ್ತು. ಬಿಲ್ಕಿಸ್ ಬಾನೊ ಪ್ರಕರಣದ ದೋಷಿಗಳನ್ನು ಬಿಡುಗಡೆಗೊಳಿಸುವ ಗುಜರಾತ್ ಸರಕಾರದ ನಿರ್ಧಾರಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News