ಸಿಯಾಚಿನ್ ಬೇಸ್ ಕ್ಯಾಂಪ್‌ಗೆ ಮುರ್ಮು ಭೇಟಿ | ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಿದ ರಾಷ್ಟ್ರಪತಿ

Update: 2024-09-26 16:04 GMT

ರಾಷ್ಟ್ರಪತಿ ದ್ರೌಪದಿ ಮುರ್ಮು | PTI 

ಲೇಹ್ : ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಲಡಾಕ್‌ನಲ್ಲಿರುವ ಭಾರತೀಯ ಸೇನಾಪಡೆಯ ಬೇಸ್‌ಕ್ಯಾಂಪ್‌ಗೆ ಗುರುವಾರ ಭೇಟಿ ನೀಡಿದ್ದು, ಅಲ್ಲಿರುವ ಸಿಯಾಚಿನ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.

1984ರ ಏಪ್ರಿಲ್‌ನಲ್ಲಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಆರಂಭಗೊಂಡ ಆಪರೇಶ್‌ನ ಮೇಘದೂತ್ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರು ಹಾಗೂ ಸೇನಾದಿಕಾರಿಗಳ ಬಲಿದಾನದ ಪ್ರತೀಕವಾಗಿ ಈ ಸ್ಮಾರಕವನ್ನು ಸ್ಥಾಪಿಸಲಾಗಿದೆ. 1984ರಲ್ಲಿ ನಡೆಸಿದ ‘ಆಪರೇಶನ್ ಮೇಘದೂತ್’ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆಯು ಜಗತ್ತಿನ ಅತಿ ಎತ್ತರದ ಸಮರಾಂಗಣವಾದ ಸಿಯಾಚಿನ್ ಗ್ಲೇಸಿಯರ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಿತ್ತು.

ಸೇನಾ ಸಮವಸ್ತ್ರ ಧರಿಸಿದ್ದ ದ್ರೌಪದಿ ಮುರ್ಮು ಅವರು ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನಿಯೋಜಿತರಾಗಿರುವ ಸೇನಾಪಡೆಗಳನ್ನು ಉದ್ದೇಶಿಸಿ ಮಾತನಾಡಿದರು. ಸಶಸ್ತ್ರಪಡೆಗಳ ಸರ್ವೋಚ್ಛ ಕಮಾಂಡರ್ ಆಗಿರುವುದು ತನಗೆ ಹೆಮ್ಮೆಯೆನಿಸುತ್ತದೆ ಎಂದು ಹೇಳಿದ ಅವರು ಸಿಯಾಚಿನ್ ಯೋಧರ ಶೌರ್ಯಕ್ಕೆ ದೇಶದ ಎಲ್ಲಾ ಪ್ರಜೆಗಳ ವೀರನಮನಗಳು. ಸಿಯಾಚಿನ್‌ನಲ್ಲಿ ಆಪರೇಶನ್ ಮೇಘದೂತ್ ಆರಂಭಗೊಂಡಾಗಿನಿಂದ ಭಾರತೀಯ ಸಶಸ್ತ್ರ ಪಡೆಗಳ ಧೀರ ಯೋಧರು ಹಾಗೂ ಅಧಿಕಾರಿಗಳು, ಈ ಪ್ರಾಂತದ ಸುರಕ್ಷತೆಯನ್ನು ಖಾತರಿಪಡಿಸಿದ್ದಾರೆ ಎಂದು ಹೇಳಿದರು.

‘‘ಈ ಯೋಧರು ಸಿಯಾಚಿನ್‌ ನಲ್ಲಿ ಅತ್ಯಂತ ಕಠೋರವಾದ ಹವಾಮಾನ ಪರಿಸ್ಥಿತಿಯನ್ನು ಎದುರಿಸುತ್ತಾರೆ. ದಟ್ಟವಾದ ಹಿಮಸುರಿಯುವಿಕೆ ಹಾಗೂ ಮೈನಸ್ 50 ಡಿಗ್ರಿ ತಾಪಮಾನದಂತಹ ಅತ್ಯಂತ ಕಠಿಣ ಸನ್ನಿವೇಶಗಳಲ್ಲಿಯೂ ಅವರು ಸಂಪೂರ್ಣ ಶ್ರದ್ಧೆ ಹಾಗೂ ಕಟ್ಟೆಚ್ಚರದೊಂದಿಗೆ ಗಡಿ ಮುಂಚೂಣಿಯನ್ನು ಕಾಯುತ್ತಿದ್ದಾರೆ. ತಾಯ್ನಾಡಿನ ರಕ್ಷಣೆಗಾಗಿ ಬಲಿದಾನ ಹಾಗೂ ಸಹಿಷ್ಣುತೆಗೆ ಅವರು ಅಸಾಧಾರಣವಾದ ನಿದರ್ಶನವಾಗಿದ್ದಾರೆ’’ ಎಂದು ರಾಷ್ಟ್ರಪತಿ ಮುರ್ಮು ಹೇಳಿದರು.

ಥೊಯಿಸೆ ವಾಯುನೆಲೆಯಲ್ಲಿ ಬಂದಿಳಿದ ರಾಷ್ಟ್ರಪತಿಯವರನ್ನು ಲಡಾಕ್‌ನ ಲೆಫ್ಟಿನೆಂಟ್ ಗವರ್ನರ್ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ಅವರು ಸ್ವಾಗತಿಸಿದರು. ಮುರ್ಮು ಅವರು ಕೇಂದ್ರಾಡಳಿತ ಲಡಾಕ್‌ ನಲ್ಲಿರುವ ಸಿಯಾಚಿನ್ ಬೇಸ್‌ಕ್ಯಾಂಪ್‌ಗೆ ಭೇಟಿ ನೀಡಿದ ದೇಶದ ಮೂರನೇ ರಾಷ್ಟ್ರಪತಿ ಆಗಿದ್ದಾರೆ.

ಸಮುದ್ರ ಮಟ್ಟದಿಂದ 20 ಸಾವಿರ ಅಡಿ ಎತ್ತರದಲ್ಲಿರುವ ಸಿಯಾಚಿನ್ ಗ್ಲೇಸಿಯರ್ ಕಾರಕೋರಂ ಪರ್ವತ ಶ್ರೇಣಿಯಲ್ಲಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News