ಅರುಣಾಚಲ ಪ್ರದೇಶ | ಗೋಹತ್ಯೆ ನಿಷೇಧ ಯಾತ್ರೆಗೆ ವಿರೋಧ ; ಏರ್‌ಪೋರ್ಟ್‌ ನಿಂದಲೇ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ ವಾಪಸ್‌

Update: 2024-09-26 16:45 GMT

  ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮೀಜಿ | PC : X 

ಇಟಾನಗರ : ಗೋಧ್ವಜ ಸ್ಥಾಪನಾ ಭಾರತ ಯಾತ್ರೆಗಾಗಿ ಅರುಣಾಚಲದ ಹೊಲೊಂಗಿಗೆ ಆಗಮಿಸಿದ್ದ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಸ್ವಾಮಿಯವರು, ಸ್ಥಳೀಯರಿಂದ ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಯಾತ್ರೆ ಮೊಟಕುಗೊಳಿಸಿ ವಾಪಾಸಾದ ಘಟನೆ ಗುರುವಾರ ನಡೆದಿದೆ.

ಗೋಧ್ವಜ ಯಾತ್ರೆಯು ಈಶಾನ್ಯ ರಾಜ್ಯಗಳಾದ್ಯಂತ ಗೋಹತ್ಯೆ ನಿಷೇಧ ಗುರಿಯನ್ನು ಹೊಂದಿದೆ. ಚಾರ್ಟರ್ಡ್ ಫ್ಲೈಟ್ ಮೂಲಕ ಹೊಲೊಂಗಿಯಲ್ಲಿರುವ ದೋನ್ಯಿ ಪೊಲೊ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವಿಮುಕ್ತೇಶ್ವರಾನಂದ ಸರಸ್ವತಿಯವರು ಅಖಿಲ ಅರುಣಾಚಲ ಪ್ರದೇಶ ವಿದ್ಯಾರ್ಥಿ ಒಕ್ಕೂಟದ (ಎಎಪಿಎಸ್‌ಯು) ಸದಸ್ಯರಿಂದ ಯಾತ್ರೆಗೆ ವಿರೋಧವನ್ನು ಎದುರಿಸಿದರು.

ಪ್ರತಿಭಟನೆ ವ್ಯಕ್ತವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಪಪುಂ ಪರೆ ಜಿಲ್ಲಾಡಳಿತವು, ಭೇಟಿಯ ಸೂಕ್ಷ್ಮತೆಯನ್ನು ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಹಿಂಬಾಲಕರಿಗೆ ಮನವರಿಕೆ ಮಾಡಿಕೊಟ್ಟಿತು. ಬಳಿಕ ಅವರು ಅಲ್ಲಿಂದ ವಾಪಾಸ್ಸಾದರು ಎಂದು ತಿಳಿದು ಬಂದಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಎಪಿಎಸ್‌ಯು ಪ್ರತಿನಿಧಿಗಳು, "ಆಧ್ಯಾತ್ಮಿಕ ನಾಯಕನನ್ನು ಹಿಂದಕ್ಕೆ ಕಳುಹಿಸುವುದು ದೇಶಕ್ಕೆ ನಕಾರಾತ್ಮಕ ಸಂದೇಶವನ್ನು ರವಾನಿಸಿದಂತಾಗಬಹುದು. ಆದರೆ, ನಾವು ಯಾವುದೇ ಧರ್ಮ, ಸಂಸ್ಥೆ ಅಥವಾ ವ್ಯಕ್ತಿಯ ವಿರುದ್ಧವಲ್ಲ ಎಂದು ಹೇಳಲು ಬಯಸುತ್ತೇವೆ. ಆದರೆ ಈ ಗೋ ರಕ್ಷಣೆ ರ‍್ಯಾಲಿಯು ಅರುಣಾಚಲ ಪ್ರದೇಶದ ಜನರ ಭಾವನೆಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.

"ಇಲ್ಲಿ, ನಾವು ಆದಿವಾಸಿಗಳು ಯಾರಾದರೂ ಅನಾರೋಗ್ಯಕ್ಕೆ ಒಳಗಾದಾಗ ಹಸುಗಳನ್ನು ಬಲಿಕೊಡುತ್ತೇವೆ. ಆ ಮೂಲಕ ಗೋವನ್ನು ರಕ್ಷಣೆಗಾಗಿ ಬಳಸುತ್ತೇವೆ. ನಮಗೆ ಗೋವುಗಳು ಸರಳವಾಗಿ ಪ್ರಾಣಿಗಳು”, ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಿತುಮ್ ತಾಲಿ ಅವರು ಸ್ಥಳೀಯ ಸಂಪ್ರದಾಯಗಳಲ್ಲಿ ಜಾನುವಾರುಗಳ ಸಾಂಸ್ಕೃತಿಕ ಮಹತ್ವವನ್ನು ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News