ʼಕೂಡಂಕುಳಂ ಪರಮಾಣು ಸ್ಥಾವರʼ ಸಾಕ್ಷ್ಯಚಿತ್ರ | ಆಸ್ಟ್ರೇಲಿಯಾ ನಿರ್ದೇಶಕ ಡೇವಿಡ್ ಬ್ರಾಡ್‌ಬರಿ ಬಂಧನ, ಗಡಿಪಾರು

Update: 2024-09-26 14:15 GMT
PC : thewire.in

ಹೊಸದಿಲ್ಲಿ : 2012ರಲ್ಲಿ ಕೂಡಂಕುಳಂ ಪರಮಾಣು ಸ್ಥಾವರದ ವಿರುದ್ಧದ ಪ್ರತಿಭಟನೆ ಕುರಿತು ಸಾಕ್ಷ್ಯಚಿತ್ರ ನಿರ್ಮಿಸಿದ್ದ ಆಸ್ಟ್ರೇಲಿಯಾದ ಸಾಕ್ಷ್ಯಚಿತ್ರ ನಿರ್ದೇಶಕ ಡೇವಿಡ್ ಬ್ರಾಡ್‌ಬರಿ ಅವರನ್ನು ಬಂಧಿಸಿ ಬಳಿಕ ಗಡಿಪಾರು ಮಾಡಲಾಗಿದೆ.

ಡೇವಿಡ್ ಬ್ರಾಡ್‌ಬರಿ ಅವರನ್ನು ಚೆನ್ನೈ ವಿಮಾನ ನಿಲ್ಲಾಣದಿಂದ ಸೆಪ್ಟಂಬರ್ 10ರಂದು ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಅನಂತರ ಈಗ ಗಡಿಪಾರು ಮಾಡಲಾಗಿದೆ. ಹಲವು ಪ್ರಶಸ್ತಿಗಳನ್ನು ಪಡೆದಿರುವ 73 ವರ್ಷದ ಡೇವಿಡ್ ಬ್ರಾಡ್‌ಬರಿ ಅವರು ತನ್ನ ಮಕ್ಕಳಾದ ನೆಕೈಟ ಬ್ರಾಡ್‌ಬರಿ(21) ಹಾಗೂ ಉಮರ್ ಬ್ರಾಡ್‌ಬರಿ (14)ಅವರೊಂದಿಗೆ ಎರಡು ವಾರಗಳ ಪ್ರವಾಸಕ್ಕೆ ಭಾರತಕ್ಕೆ ಆಗಮಿಸಿದ್ದರು.

ಡೇವಿಡ್ ಬ್ರಾಡ್‌ಬೆರಿ ಅವರು ತನ್ನ ಪತ್ನಿ ಟ್ರೀನಾ ಅವರೊಂದಿಗೆ 2012ರಲ್ಲಿ ಭಾರತಕ್ಕೆ ಕೊನೆಯ ಭಾರಿ ಭೇಟಿ ನೀಡಿದ್ದರು. ಚಿತ್ರನಿರ್ದೇಶಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಆಗಿದ್ದ ಟ್ರೀನಾ ಅವರು ಐದು ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ನಿಧನರಾಗಿದ್ದರು.

ತನ್ನ ಮಕ್ಕಳನ್ನು ವಾರಣಾಸಿಗೆ ಕರೆದುಕೊಂಡು ಹೋಗಲು ಹಾಗೂ ಹಿಂದೂಗಳು ಸಾವನ್ನು ಹೇಗೆ ನಿರ್ವಹಿಸುತ್ತಾರೆ ಹಾಗೂ ತಮ್ಮ ಪ್ರೀತಿಪಾತ್ರರನ್ನು ಮುಂದಿನ ಜೀವನಕ್ಕೆ ಬೀಳ್ಕೊಡುತ್ತಾರೆ ಎಂಬುದನ್ನು ಮುಖ್ಯವಾಗಿ ತನ್ನ ಪುತ್ರ ಉಮರ್‌ಗೆ ತೋರಿಸಲು ಯೋಜಿಸಿದ್ದೆ ಎಂದು ಡೇವಿಡ್ ಬ್ರಾಡ್‌ಬರಿ ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

‘‘ಭಾರತದಲ್ಲಿ ವಿಮಾನದಿಂದ ಇಳಿಯುತ್ತಿದ್ದಂತೆ, ನನ್ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಶೌಚಾಲಯ ಕೂಡ ಇಲ್ಲದ ಅನೈರ್ಮಲ್ಯ ಹಾಗೂ ಅಸಹ್ಯಕರ ಕೊಠಡಿಯಲ್ಲಿ 24 ಗಂಟೆಗಳ ಕಾಲ ಇರಿಸಲಾಯಿತು. ಆಸ್ಟ್ರೇಲಿಯಾ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕಿಸಲು ಅವಕಾಶ ನೀಡುವಂತೆ ಕೋರಿದೆ. ಆದರೆ, ಅದಕ್ಕೆ ನಿರಾಕರಿಸಲಾಯಿತು. ನನ್ನ ಆರೋಗ್ಯ ಸ್ಥಿತಿಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ ಹೊರತಾಗಿಯೂ ಔಷಧಗಳನ್ನು ನಿರಾಕರಿಸಲಾಯಿತು. ಬಳಿಕ ನನ್ನನ್ನು ಭಾರತದಿಂದ ಗಡಿಪಾರು ಮಾಡಲಾಯಿತು. ಆದರೆ, ನನ್ನ ಮಕ್ಕಳು ಅಲ್ಲೇ ಇದ್ದಾರೆ’’ ಎಂದು ಡೇವಿಡ್ ಬ್ರಾಡ್‌ಬರಿ ಹೇಳಿದ್ದಾರೆ.

‘‘ನನ್ನನ್ನು ಅಸಹ್ಯಕರ ಕೊಠಡಿಯೊಂದರಲ್ಲಿ ಇರಿಸಲಾಗಿತ್ತು. ಅಲ್ಲಿನ ಮಂಚದ ಮೇಲಿದ್ದ ಹಾಸಿಗೆ ಕೊಳಕಾಗಿತ್ತು. ಹೊದಿಕೆ ಇರಲಿಲ್ಲ. ಮಂಚದ ಅಡಿಯಲ್ಲಿ ಕಾಗದ ಹಾಗೂ ಕಸ ತುಂಬಿತ್ತು. ಇಲ್ಲಿ ನನಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ನಾನು ಭಾರತಕ್ಕೆ ಭೇಟಿ ನೀಡುವ ಉದ್ದೇಶ, 2012ರಲ್ಲಿ ಭಾರತಕ್ಕೆ ಭೇಟಿ ನೀಡಿದ ಉದ್ದೇಶ, ಭಾರತದಲ್ಲಿ ನನ್ನ ಸಂಪರ್ಕದ ಬಗ್ಗೆ ಮಾಹಿತಿ ಒದಗಿಸುವಂತೆ ಕೇಳಲಾಯಿತು’’ ಎಂದು ಡೇವಿಡ್ ಬ್ರಾಡ್‌ಬರಿ ಹೇಳಿದ್ದಾರೆ.

ಕೂಡಾಂಕುಳಂ ಪರಮಾಣು ಸ್ಥಾವರದ ಕುರಿತ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿ ನನ್ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಅನಂತರ ಗಡಿಪಾರು ಮಾಡಲಾಯಿತು ಎಂದು ಆಸ್ಟ್ರೇಲಿಯಾ ಸಾಕ್ಷ್ಯಚಿತ್ರ ನಿರ್ದೇಶಕ ಡೇವಿಡ್ ಬ್ರಾಡ್‌ಬರಿ ಹೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News