ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ದೋಷಿಗಳ ಜಾಮೀನು ಅರ್ಜಿ ವಜಾ
ಹೊಸದಿಲ್ಲಿ: ಬಿಲ್ಕಿಸ್ ಬಾನು ಅತ್ಯಾಚಾರ ಹಾಗೂ ಅವರ ಕುಟುಂಬದ ಸದಸ್ಯರ ಹತ್ಯೆ ಪ್ರಕರಣದಲ್ಲಿ ದೋಷಿಗಳಾಗಿದ್ದ ರಾಧೇಶ್ಯಾಮ್ ಭಗವಾನ್‌ದಾಸ್ ಹಾಗೂ ರಾಜುಭಾಯಿ ಬಾಬುಲಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಶುಕ್ರವಾರ ವಜಾಗೊಳಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, "ಒಂದು ವೇಳೆ ಇದಕ್ಕೆ ಅವಕಾಶ ನೀಡಿದರೆ, ನ್ಯಾಯಾಂಗ ವ್ಯವಸ್ಥೆಯ ಏರುಪೇರು ಮಾತ್ರ ಆಗುವುದಿಲ್ಲ, ಬದಲಿಗೆ ಭವಿಷ್ಯದ ಪ್ರಕರಣಗಳಲ್ಲಿ ಪೂರ್ವನಿದರ್ಶನವಾಗುವ ಸಾಧ್ಯತೆಯೂ ಇದೆ" ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿತು.
ಹೊಸದಾಗಿ ಸಲ್ಲಿಸಲಾಗಿರುವ ಕ್ಷಮಾದಾನ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡುವವರೆಗೂ ತಮಗೆ ತಾತ್ಕಾಲಿಕ ಜಾಮೀನು ಮಂಜೂರು ಮಾಡಬೇಕು ಎಂದು ಭಗವಾನ್‌ದಾಸ್ ಮತ್ತು ಬಾಬುಲಾಲ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2022ರ ಸ್ವಾತಂತ್ರ್ಯ ದಿನಾಚರಣೆಯಂದು ಗುಜರಾತ್ ಸರಕಾರವು ತಮ್ಮನ್ನು ಬಿಡುಗಡೆ ಮಾಡಿದ್ದ ಕ್ರಮವನ್ನು ಜನವರಿಯಲ್ಲಿ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ಕ್ರಮವನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದಾರೆ.
ಜನವರಿಯಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು 2002ರಲ್ಲಿ ಸಾಂವಿಧಾನಿಕ ಪೀಠ ನೀಡಿದ್ದ ತೀರ್ಪಿಗೆ ವ್ಯತಿರಿಕ್ತವಾಗಿದೆ. ಹೀಗಾಗಿ, ಗುಜರಾತ್ ಸರಕಾರ ತಮಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡಿರುವ ಕ್ರಮದ ಕುರಿತ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂದು ಭಗವಾನ್‌ದಾಸ್ ಮತ್ತು ಬಾಬುಲಾಲ್ ಮೇಲ್ಮನವಿ ಸಲ್ಲಿಸಿದ್ದಾರೆ.
2002ರಲ್ಲಿ ಗುಜರಾತ್‌ನಲ್ಲಿ ಸ್ಫೋಟಗೊಂಡಿದ್ದ ಗುಜರಾತ್ ಗಲಭೆಯ ಸಂದರ್ಭದಲ್ಲಿ ಬಿಲ್ಕಿಸ್ ಬಾನು ಮೇಲೆ ಅತ್ಯಾಚಾರವೆಸಗಿ, ಆಕೆಯ ಕುಟುಂಬದ ಸದಸ್ಯರನ್ನು ಹತ್ಯೆಗೈದ ಆರೋಪದಲ್ಲಿ ಭಗವಾನ್‌ದಾಸ್ ಮತ್ತು ಬಾಬುಲಾಲ್ ನನ್ನು ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದಾದ ನಂತರ 2022ರ ಸ್ವಾತಂತ್ರ್ಯ ದಿನಾಚರಣೆಯಂದು ಈ ಇಬ್ಬರು ದೋಷಿಗಳಿಗೆ ಕ್ಷಮಾದಾನ ನೀಡಿ ಗುಜರಾತ್ ಸರಕಾರ ಬಿಡುಗಡೆಗೊಳಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.