ಬಿಲ್ಕಿಸ್ ಬಾನು ಪ್ರಕರಣ: ಶರಣಾದ ಎರಡೇ ವಾರಗಳ ಬಳಿಕ ಐದು ದಿನಗಳ ಪರೋಲ್‌ನಲ್ಲಿ ಹೊರಬಂದ ಅಪರಾಧಿ
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಬಿಲ್ಕಿಸ್ ಬಾನು ಪ್ರಕರಣದಲ್ಲಿಯ 11 ಅಪರಾಧಿಗಳು ಮರಳಿ ಜೈಲು ಸೇರಿ ಎರಡು ವಾರಗಳಷ್ಟೇ ಕಳೆದಿದ್ದು,ಇದೀಗ ಅವರಲ್ಲೋರ್ವನಾದ ಪ್ರದೀಪ್ ಮೋಧಿಯಾನನ್ನು ಐದು ದಿನಗಳ ಪರೋಲ್‌ನಲ್ಲಿ ಬುಧವಾರ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಮೋಧಿಯಾನ ಮಾವ ನಿಧನರಾಗಿದ್ದು, ಗುಜರಾತಿನ ದಾಹೋಡ್ ಜಿಲ್ಲೆಯ ರಂಧಿಕಪುರದ ತನ್ನ ಸ್ವಗ್ರಾಮಕ್ಕೆ ಮರಳಲು ಗುಜರಾತ ಉಚ್ಚ ನ್ಯಾಯಾಲಯವು ಆತನಿಗೆ ಪರೋಲ್ ಮಂಜೂರು ಮಾಡಿದೆ.
2022,ಆ.15ರಂದು ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಅಪರಾಧಿಗಳು ಜ.21ರಂದು ತಡರಾತ್ರಿ ಶರಣಾಗಿದ್ದರು.
ಮೋಧಿಯಾ 30 ದಿನಗಳ ಪರೋಲ್‌ನ್ನು ಕೋರಿದ್ದ. ತನ್ನ ಕಕ್ಷಿದಾರ ಸರ್ವೋಚ್ಚ ನ್ಯಾಯಾಲಯದ ಆದೇಶದ ಬಳಿಕ ಸಕಾಲದಲ್ಲಿ ಜೈಲಿಗೆ ಮರಳಿದ್ದಾನೆ ಮತ್ತು ಜೈಲಿನಲ್ಲಿ ಆತನ ನಡವಳಿಕೆಯೂ ಉತ್ತಮವಾಗಿತ್ತು ಎಂದು ಮೋಧಿಯಾ ಪರ ವಕೀಲರು ಉಚ್ಚ ನ್ಯಾಯಾಲಯದಲ್ಲಿ ಪ್ರತಿಪಾದಿಸಿದ್ದರು.
ಪರೋಲ್ ಷರತ್ತುಗಳಂತೆ ಮೋಧಿಯಾ ರಂಧಿಕಪುರ ಪೋಲಿಸ್ ಠಾಣೆಗೆ ವರದಿ ಮಾಡಿಕೊಳ್ಳುವ ಅಗತ್ಯವಿಲ್ಲ. ಪರೋಲ್ ಅವಧಿಯಲ್ಲಿ ಜಿಲ್ಲೆಯ ಪೋಲಿಸರು ವಹಿಸಬೇಕಾದ ಯಾವುದೇ ಪಾತ್ರವಿಲ್ಲ. ಆತ ಸ್ವಯಂ ಜೈಲಿಗೆ ಮರಳುವ ನಿರೀಕ್ಷೆಯಿದೆ ಎಂದು ದಾಹೋಡ್‌ನ ಲಿಮಖೇಡಾ ಡಿಎಸ್‌ಪಿ ವಿಶಾಖಾ ಜೈನ್ ತಿಳಿಸಿದರು.
ಎಲ್ಲ ಅಪರಾಧಿಗಳನ್ನು ಅವಧಿಪೂರ್ವ ಬಿಡುಗಡೆಗೊಳಿಸುವ ಗುಜರಾತ್ ಸರಕಾರದ ವಿವಾದಾತ್ಮಕ ನಿರ್ಧಾರಕ್ಕೆ ಮುನ್ನ 2008,ಜನವರಿಯಿಂದ ತನ್ನ ಜೈಲುವಾಸದ ಅವಧಿಯಲ್ಲಿ ಮೋಧಿಯಾನನ್ನು ಪರೋಲ್‌ನಲ್ಲಿ 1,041 ಮತ್ತು ಫರ್ಲೋದಲ್ಲಿ 223 ದಿನಗಳ ಅವಧಿಗೆ ಬಿಡುಗಡೆಗೊಳಿಸಲಾಗಿತ್ತು.
ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆಗೊಳಿಸುವ ನಿರ್ಧಾರಕ್ಕಾಗಿ ಕಳೆದ ಜನವರಿಯಲ್ಲಿ ಗುಜರಾತ್ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು,ಅದರ ನಿರ್ಧಾರವನ್ನು ರದ್ದುಗೊಳಿಸಿತ್ತು ಮತ್ತು ನಿಗದಿತ ಗಡುವಿನೊಳಗೆ ಜೈಲಿಗೆ ಮರಳುವಂತೆ ಅಪರಾಧಿಗಳಿಗೆ ಆದೇಶಿಸಿತ್ತು.
ಜೈಲಿನಲ್ಲಿದ್ದಾಗ ಹಲವು ಬಾರಿ ಪರೋಲ್ ಪಡೆದು ಹೊರಗೆ ಬಂದಿದ್ದ ಅಪರಾಧಿಗಳು ಸಾಕ್ಷಿಗಳಿಗೆ ಬೆದರಿಕೆಯೊಡ್ಡಿದ್ದರು. ಅವರ ಅವಧಿಪೂರ್ವ ಬಿಡುಗಡೆಗೆ ಮಾನವ ಹಕ್ಕುಗಳ ಕಾರ್ಯಕರ್ತರು,ಕಾನೂನು ತಜ್ಞರು,ಇತರರು ಮತ್ತು ಸ್ವತಃ ಬಿಲ್ಕಿಸ್ ಬಾನು ಆಘಾತ ಮತ್ತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.