2000 ಕೋಟಿ.ರೂ ಷೇರು ಮಾರುಕಟ್ಟೆ ಹಗರಣ | 200ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ 22 ವರ್ಷದ ಬಿಶಾಲ್ ಫುಕಾನ್ ಬಂಧನ
ಗುವಾಹಟಿ : ಮತ್ತೊಂದು ಬೃಹತ್ ಷೇರು ಮಾರುಕಟ್ಟೆ ಹಗರಣವೊಂದು ಅಸ್ಸಾಂನಿಂದ ವರದಿಯಾಗಿದ್ದು, ಈ ಸಂಬಂಧ ಬಹುಕೋಟಿ ಹೂಡಿಕೆ ಹಗರಣದಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದ 22 ವರ್ಷದ ಬಿಶಾಲ್ ಪುಖಾನ್ ರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಹಲವು ಗಂಟೆಗಳ ವಿಚಾರಣೆಯ ನಂತರ ಬಿಶಾಲ್ ಪುಖಾನ್ ನನ್ನು ದಿಬ್ರುಗಢದಿಂದ ಬಂಧಿಸಿರುವ ಪೊಲೀಸರು, ಉದಯೋನ್ಮುಖ ಅಸ್ಸಾಂ ನಟ, ನೃತ್ಯ ನಿರ್ದೇಶಕ ಹಾಗೂ ಇನ್ ಪ್ಲ್ಯುನ್ಸರ್ ಸುಮಿ ಬೋರಾಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ನಿಶ್ಚಿತವಾಗಿ ಶೇ. 30 ಅಥವಾ ಅದಕ್ಕಿಂತ ಹೆಚ್ಚು ಲಾಭ ನೀಡುವುದಾಗಿ ಹಲವಾರು ಜನರಿಗೆ ಭರವಸೆ ನೀಡಿ ಹಲವು ಕೋಟಿ ಮೊತ್ತವನ್ನು ಸಂಗ್ರಹಿಸಿರುವ ಆರೋಪಕ್ಕೆ ಅಪ್ಪರ್ ಅಸ್ಸಾಂ ನಿವಾಸಿಯಾದ ಬಿಶಾಲ್ ಪುಖಾನ್ ಗುರಿಯಾಗಿದ್ದಾನೆ. ಆದರೆ, ಇಂತಹ ಆಮಿಷದ ವಿರುದ್ಧ ಸೆಬಿ ಈಗಾಗಲೇ ಎಚ್ಚರಿಕೆ ನೀಡಿದೆ.
ಕೇವಲ 22 ವರ್ಷಕ್ಕೇ ಬಿಶಾಲ್ ಪುಖಾನ್ ರೂ. 2,000 ಕೋಟಿ ಸಾಮ್ರಾಜ್ಯವನ್ನು ಸ್ಥಾಪಿಸಿದ್ದಾನೆ. ಅಕ್ರಮ ಗಳಿಕೆಯ ಮೂಲಕ ಪುಖಾನ್ ಪಾರ್ಸೆಲಿಯ ಫಾರ್ಮಾಸ್ಯೂಟಿಕಲ್ ಎಂಬ ಕಂಪನಿಯನ್ನೂ ಸ್ಥಾಪಿಸಿದ್ದಾನೆ ಎನ್ನಲಾಗಿದೆ.
ಪುಖಾನ್ ನನ್ನು ದಿಬ್ರುಗಢದಲ್ಲಿನ ಪ್ರಭಾಂಜಲಿ ಅಪಾರ್ಟ್ ಮೆಂಟ್ ನಲ್ಲಿರುವ ಆತನ ನಿವಾಸದಿಂದ ಪೊಲೀಸರು ಕರೆದೊಯ್ದಿದ್ದಾರೆ.
ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಪೊಲೀಸರು ಯುಎಇ ದಿರ್ಹಮ್, ಐಫೋನ್ ಗಳು ಹಾಗೂ ಇನ್ನಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆಗಾಗಿ ಅಪಾರ್ಟ್ ಮೆಂಟ್ ನ ಭದ್ರತಾ ಸಿಬ್ಬಂದಿಗಳು ಹಾಗೂ ಪುಖಾನ್ ನ ಕಾರು ಚಾಲಕನಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಈ ಪ್ರಕರಣದಲ್ಲಿ ಇನ್ನಿತರ ವ್ಯಕ್ತಿಗಳೂ ಭಾಗಿಯಾಗಿರಬಹುದು ಎಂಬ ಶಂಕೆಯಲ್ಲಿ ಅಸ್ಸಾಂನ ವಿವಿಧ ಸ್ಥಳಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾಯ್ದೆ, 2019 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ದಿಬ್ರುಗಢ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪುಖಾನ್ ಅನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ, ಪೊಲೀಸರು ಆತನನ್ನು ತಮ್ಮ ವಶಕ್ಕೆ ಕೋರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.