ಪ್ರಿಯಾಂಕಾ ಗಾಂಧಿ ವಿರುದ್ಧ ಕ್ರಮಕ್ಕೆ ಚು.ಆಯೋಗಕ್ಕೆ ಬಿಜೆಪಿಯ ಆಗ್ರಹ
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜಸ್ಥಾನದಲ್ಲಿ ತನ್ನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಲು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಧಾರ್ಮಿಕ ಶ್ರದ್ಧೆಯನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಬುಧವಾರ ಆರೋಪಿಸಿರುವ ಬಿಜೆಪಿ, ಅವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದೆ.
ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ ಮತ್ತು ಅರ್ಜುನ ರಾಮ ಮೇಘ್ವಾಲ್ ಅವರನ್ನೊಳಗೊಂಡ ಬಿಜೆಪಿ ನಿಯೋಗವು ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.
ದೇವಸ್ಥಾನವೊಂದರಲ್ಲಿ ಮೋದಿ ನೀಡಿದ್ದ ಕಾಣಿಕೆಯ ಕವರ್ ತೆರೆದಾಗ ಅದರಲ್ಲಿ ಕೇವಲ 21 ರೂ.ಗಳಿದ್ದವು ಎಂದು ಪ್ರಿಯಾಂಕಾ ಅ.21ರಂದು ದೌಸಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಹೇಳಿದ್ದರು. ತಾನು ಸುದ್ದಿಯನ್ನು ನೋಡಿದ್ದೆ, ಆದರೆ ಇದು ಸತ್ಯವೋ ಸುಳ್ಳೋ ಎನ್ನುವುದು ತನಗೆ ತಿಳಿದಿಲ್ಲ ಎಂದೂ ಅವರು ಹೇಳಿದ್ದರು ಎಂದು ಬಿಜೆಪಿ ತನ್ನ ದೂರಿನಲ್ಲಿ ತಿಳಿಸಿದೆ.
ಬಿಜೆಪಿಯು ಲಕೋಟೆಗಳನ್ನು ಸಾರ್ವಜನಿಕರಿಗೆ ತೋರಿಸುತ್ತದೆ, ಆದರೆ ಚುನಾವಣೆಗಳ ಬಳಿಕ ಅವುಗಳನ್ನು ತೆರೆದಾಗ ಒಳಗೆ ಏನೂ ಇರುವುದಿಲ್ಲ ಎಂದು ಪ್ರಿಯಾಂಕಾ ಬಿಜೆಪಿ ವಿರುದ್ಧ ದಾಳಿ ನಡೆಸಿದ್ದರು.
ಬಿಜೆಪಿ ಪ್ರಿಯಾಂಕಾರ ಹೇಳಿಕೆಗಳ ವೀಡಿಯೊವನ್ನು ದೂರಿನೊಂದಿಗೆ ಸಲ್ಲಿಸಿದೆ.
ಈಗಿರುವ ಕಾನೂನಿನ ಪ್ರಕಾರ ಪ್ರಿಯಾಂಕಾ ಅಪರಾಧವನ್ನೆಸಗಿದ್ದಾರೆ. ಅವರು ಕಾನೂನಿಗಿಂತ ಮೇಲಿದ್ದಾರೆಯೇ? ಅವರು ಯಾವುದೇ ಕಾನೂನಿನಲ್ಲಿ ನಂಬಿಕೆಯನ್ನು ಹೊಂದಿದ್ದಾರೆಯೇ? ಅವರು ಸೌಹಾರ್ದತೆಯನ್ನು ಕದಡಲು ಧಾರ್ಮಿಕ ಭಾವನೆಗಳನ್ನು ಬಳಸುತ್ತಿದ್ದಾರೆ. ಅವರು ಹಾಗೆ ಮಾಡುವಂತಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪುರಿ ಮತ್ತು ಮೇಘ್ವಾಲ್ ಹೇಳಿದರು.