ಹಿಂದಿನ ಸರಕಾರ 10 ವರ್ಷಗಳ ಅವಧಿಯಲ್ಲಿ ಒದಗಿಸಿದ ಉದ್ಯೋಗಳ ಒಂದೂವರೆ ಪಟ್ಟು ಹೆಚ್ಚು ಉದ್ಯೋಗಗಳನ್ನು ಬಿಜೆಪಿ ಸರಕಾರ ಒದಗಿಸಿದೆ: ಪ್ರಧಾನಿ ಮೋದಿ
ಹೊಸದಿಲ್ಲಿ: ಹಿಂದಿನ ಸರಕಾರ ತನ್ನ ಹತ್ತು ವರ್ಷಗಳ ಅವಧಿಯಲ್ಲಿ ಒದಗಿಸಿದ್ದ ಉದ್ಯೋಗಳ ಒಂದೂವರೆ ಪಟ್ಟು ಹೆಚ್ಚು ಉದ್ಯೋಗಗಳನ್ನು ಅಷ್ಟೇ ಅವಧಿಯಲ್ಲಿ ಬಿಜೆಪಿ ಸರಕಾರ ಒದಗಿಸಿದೆ ಎಂದು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹೇಳಿದರು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ವಿಡಿಯೊ ಸಂವಾದದ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಯುವಕರಿಗೆ ಸರಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ಹಸ್ತಾಂತರಿಸಿ ಮಾತನಾಡಿದ ಪ್ರಧಾನಿ ಮೋದಿ, ಹಿಂದಿನ ಸರಕಾರವು ಉದ್ಯೋಗ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದೀರ್ಘಾವಧಿ ತೆಗೆದುಕೊಂಡಿದ್ದರಿಂದ ಲಂಚಾವತಾರ ಜನ್ಮ ತಾಳಿತ್ತು ಎಂದು ಆರೋಪಿಸಿದರು.
ನಮ್ಮ ಸರಕಾರವು ಉದ್ಯೋಗ ನೇಮಕಾತಿಯಲ್ಲಿ ಪಾರದರ್ಶಕತೆಯನ್ನು ತಂದಿದ್ದು, ಕಾಲಮಿತಿಯೊಳಗೆ ಉದ್ಯೋಗ ನೇಮಕಾತಿಯನ್ನು ಖಾತರಿಪಡಿಸಲು ಕ್ರಮ ಕೈಗೊಂಡಿದೆ ಎಂದು ಪ್ರತಿಪಾದಿಸಿದರು.
ಇದೀಗ ಯುವಕರಲ್ಲಿ ಎಲ್ಲರಿಗೂ ಸಮಾನಾವಕಾಶ ದೊರೆಯುತ್ತದೆ ಎಂಬ ವಿಶ್ವಾಸ ಮೂಡಿದ್ದು, ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಸರಕಾರಿ ಉದ್ಯೋಗ ವ್ಯವಸ್ಥೆಯಲ್ಲಿ ತಮಗೊಂದು ಸ್ಥಾನ ಪಡೆಯಬಹುದು ಎಂಬ ಭರವಸೆ ಬೆಳೆಸಿಕೊಂಡಿದ್ದಾರೆ ಎಂದು ಅವರು ಹೇಳಿದರು.
ಒಂದು ಕೋಟಿ ನಿವಾಸಗಳಿಗೆ ಮೇಲ್ಚಾವಣಿ ಸೌರ ವಿದ್ಯುತ್ ಅಳವಡಿಸುವ ಯೋಜನೆಯಿಂದ ಹಿಡಿದು, ಮೂಲಸೌಕರ್ಯ ವಲಯದಲ್ಲಿನ ಬೃಹತ್ ಹೂಡಿಕೆಯವರೆಗೆ ನಮ್ಮ ಸರಕಾರವು ತೆಗೆದುಕೊಂಡಿರುವ ಕ್ರಮಗಳಿಂದ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.