ಬಿಜೆಪಿ ದೇಶದ ಹೆಸರು ಬದಲಾಯಿಸಿದೆಯೇ ಹೊರತು ಬೇರೆ ಏನನ್ನೂ ಮಾಡಿಲ್ಲ: ಉದಯನಿಧಿ ಸ್ಟಾಲಿನ್

Update: 2023-11-22 15:23 GMT

ಉದಯನಿಧಿ ಸ್ಟಾಲಿನ್ | Photo: PTI 

ಈರೋಡ್: ಬಿಜೆಪಿ ಅಧಿಕಾರಕ್ಕೆ ಬಂದು ಆರು ವರ್ಷ ಕಳೆದರೂ ದೇಶದ ಹೆಸರು ಬದಲಾಯಿಸಿದೆಯೇ ಹೊರತು ಬೇರೆ ಏನನ್ನೂ ಮಾಡಿಲ್ಲ ಎಂದು ಸಚಿವ ಹಾಗೂ ಡಿಎಂಕೆಯ ಯುವ ಘಟಕದ ಕಾರ್ಯದರ್ಶಿ ಉದಯನಿಧಿ ಸ್ಟಾಲಿನ್ ಈರೋಡ್ ನಲ್ಲಿ ಮಂಗಳವಾರ ಹೇಳಿದ್ದಾರೆ.

ಡಿಸೆಂಬರ್ 17ರಂದು ನಡೆಯಲಿರುವ ಡಿಎಂಕೆ ಯುವ ಘಟಕದ ರಾಜ್ಯ ಸಮಾವೇಶದ ಸಿದ್ಧತೆಯ ಪರಿಶೀಲನಾ ಸಭೆಯಲ್ಲಿ ಅವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

2014ರಲ್ಲಿ ಚುನಾವಣಾ ಪ್ರಚಾರದ ಸಂದರ್ಭ ನರೇಂದ್ರ ಮೋದಿ ಅವರು ಕಪ್ಪು ಹಣವನ್ನು ನಿರ್ಮೂಲನೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಅವರು ಅದನ್ನು ಮಾಡಿಲ್ಲ. 2020ರ ವೇಳೆ ಭಾರತವನ್ನು ಸೂಪರ್ ಪವರ್ ಮಾಡಲಾಗುವುದು ಹೇಳಿದ್ದ ಮೋದಿ, ಈಗ ಅದನ್ನು 2047ರಲ್ಲಿ ಮಾಡಲಾಗುವುದು ಎಂದು ಹೇಳಿದ್ದಾರೆ. ಭಾರತವನ್ನು ಬದಲಾಯಿಸುತ್ತೇನೆ ಎಂದ ಮೋದಿ, ಭಾರತದ ಹೆಸರನ್ನು ಮಾತ್ರ ಬದಲಾಯಿಸಿದ್ದಾರೆ. 2024ರ ಚುನಾವಣೆಯಲ್ಲಿ ನಾವು ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಗುಲಾಮ ಪಕ್ಷಗಳ ನಾಯಕ ಎಂದು ಬಣ್ಣಿಸಿದ ಉದಯನಿಧಿ ಸ್ಟಾಲಿನ್, ನಾವು 2021ರಲ್ಲಿ ತಮಿಳುನಾಡಿನಲ್ಲಿ ಗುಲಾಮ ಪಕ್ಷವನ್ನು ಸೋಲಿಸಿದ್ದೇವೆ. ಅದೇ ರೀತಿ ನಾವು ಸಂಸದೀಯ ಚುನಾವಣೆಯಲ್ಲಿ ಗುಲಾಮಿ ಪಕ್ಷಗಳ ನಾಯಕನಾದ ಬಿಜೆಪಿಯನ್ನು ಸೋಲಿಸಬೇಕು ಎಂದರು.

ಎಐಎಡಿಎಂಕೆ ಕುರಿತು ಮಾತನಾಡಿದ ಅವರು, ಎಐಎಡಿಎಂಕೆ ಸರಕಾರ ತಮಿಳುನಾಡಿನ ಹಕ್ಕುಗಳನ್ನು ಬಲಿಕೊಟ್ಟಿದೆ. ನೀಟ್ ಗೆ ಅವಕಾಶ ನೀಡಿದವರು ಅವರೇ. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಅಧಿಕಾರಾವಧಿಯಲ್ಲಿ ತಮಿಳುನಾಡಿಗೆ ನೀಟ್ ಬಂದಿರಲಿಲ್ಲ. ಅವರು ನಿಧನರಾದ ಬಳಿಕ ಎಐಡಿಎಂಕೆ ಇದಕ್ಕೆ ಅವಕಾಶ ನೀಡಿದೆ ಎಂದು ಅವರು ಹೇಳಿದರು.

ಇದಕ್ಕಿಂದ ಮುನ್ನ ಉದಯನಿಧಿ ಸ್ಟಾಲಿನ್ ಅವರು ಈರೋಡ್ನಲ್ಲಿ 2,580 ಹಿರಿಯ ಪದಾಧಿಕಾರಿಗಳನ್ನು ಗೌರವಿಸಿದರು. ಈ ಸಂದರ್ಭ ಸಚಿವರಾದ ಎಸ್. ಮುತ್ತುಸ್ವಾಮಿ, ಶಿವ ಮೆಯ್ಯನಾಥನ್, ಜಿಲ್ಲಾಧಿಕಾರಿ ಗೋಪಾಲ್ ಸುಂಕರ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News