ಬಿಜೆಪಿ ಪೌರತ್ವ ವಿಷಯವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ : ಮಮತಾ ಬ್ಯಾನರ್ಜಿ

Update: 2023-12-29 15:55 GMT

ಮಮತಾ ಬ್ಯಾನರ್ಜಿ | Photo : PTI 

ಕೋಲ್ಕತಾ: ಬಿಜೆಪಿಯು ಪೌರತ್ವ ವಿಷಯವನ್ನು ರಾಜಕೀಯ ಲಾಭ ಗಳಿಕೆಗಾಗಿ ಬಳಸಿಕೊಳ್ಳುತ್ತಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಗುರುವಾರ ಉತ್ತರ 24 ಪರಗಣಗಳ ಜಿಲ್ಲೆಯ ದೇಗಂಗಾದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಗಡಿ ಪ್ರದೇಶಗಳಲ್ಲಿ ವಾಸವಿರುವ ಜನರು ಪೌರತ್ವವನ್ನು ಹೊಂದಿರದಿದ್ದರೆ ರಾಜ್ಯ ಮತ್ತು ಕೇಂದ್ರದ ಅಭಿವೃದ್ಧಿ ಯೊಜನೆಗಳ ಲಾಭಗಳನ್ನು ಅವರು ಹೇಗೆ ಪಡೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ತನ್ನ ರಾಜಕೀಯ ಅಜೆಂಡಾಕ್ಕಾಗಿ ಪೌರತ್ವ ವಿಷಯವನ್ನು ಬಳಸಿಕೊಳ್ಳುತ್ತಿದೆ. ಅದು ಈ ವಿಷಯದಲ್ಲಿ ಜನರನ್ನು ದಾರಿ ತಪ್ಪಿಸುತ್ತಿದೆ. ಈ ಹಿಂದೆ ಪೌರತ್ವ ಮಂಜೂರು ಮಾಡುವುದನ್ನು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಿದ್ದರು. ಆದರೆ ಈಗ ರಾಜಕೀಯಕ್ಕಾಗಿ ಅವರಿಂದ ಈ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ ಎಂದರು.

ಪೌರತ್ವ ವಿಷಯವನ್ನು ಎತ್ತುತ್ತಿರುವ ಹಿಂದೆ ಧರ್ಮಗಳ ಆಧಾರದಲ್ಲಿ ಜನರನ್ನು ವಿಭಜಿಸುವ ಬಿಜೆಪಿಯ ಅಜೆಂಡಾ ಅಡಗಿದೆ ಎಂದು ಆರೋಪಿಸಿದ ಬ್ಯಾನರ್ಜಿ, “ಅವರು ಜನರನ್ನು ವಿಭಜಿಸಲು ಬಯಸಿದ್ದಾರೆ. ಅವರು ಕೆಲವರಿಗೆ ಪೌರತ್ವವನ್ನು ನೀಡಲು ಮತ್ತು ಇತರರಿಗೆ ನಿರಾಕರಿಸಲು ಬಯಸಿದ್ದಾರೆ. ಒಂದು ಸಮುದಾಯವು ಪೌರತ್ವವನ್ನು ಪಡೆಯುತ್ತಿದ್ದರೆ ಇನ್ನೊಂದು ಸಮುದಾಯಕ್ಕೂ ಅದು ಸಿಗಬೇಕು. ಈ ತಾರತಮ್ಯವು ತಪ್ಪು. ನಾವು ಈ ತಾರತಮ್ಯದ ವಿರುದ್ಧವಾಗಿದ್ದೇವೆ”ಎಂದರು.

1971ರಲ್ಲಿ ಮತ್ತು ನಂತರ ಬಾಂಗ್ಲಾದೇಶದಿಂದ ಬಂದವರಿಗೆ ಭೂಮಿಯ ಹಕ್ಕುಗಳನ್ನು ನೀಡುವ ತನ್ನ ಟಿಎಂಸಿ ಸರಕಾರದ ಉಪಕ್ರಮವನ್ನು ಎತ್ತಿ ತೋರಿಸಿದ ಅವರು, ನಿರಾಶ್ರಿತರ ಕಾಲನಿಗಳಲ್ಲಿ ವಾಸವಾಗಿರುವವರು ನಿರಾಶ್ರಿತರಾಗಿಯೇ ಮುಂದುವರಿಯದಂತೆ ಅವರಿಗೆ ಭೂಮಿ ಹಕ್ಕುಗಳನ್ನು ಒದಗಿಸುವುದರ ಮಹತ್ವವನ್ನು ಒತ್ತಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಈ ನೆಲದ ಕಾನೂನಾಗಿದೆ ಮತ್ತು ಅದರ ಅನುಷ್ಠಾನವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದ ಬೆನ್ನಿಗೇ ಬ್ಯಾನರ್ಜಿಯವರ ಹೇಳಿಕೆಗಳು ಹೊರಬಿದ್ದಿವೆ. ಈ ವಿಷಯದಲ್ಲಿ ಬ್ಯಾನರ್ಜಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದೂ ಶಾ ಆರೋಪಿಸಿದ್ದರು.

ಸಂಸತ್ತು 2019ರಲ್ಲಿ ಅಂಗೀಕರಿಸಿರುವ ಸಿಎಎ ಅನ್ನು ಬ್ಯಾನರ್ಜಿ ನೇತೃತ್ವದ ಟಿಎಂಸಿ ವಿರೋಧಿಸುತ್ತಲೇ ಬಂದಿದೆ.

ಶಾ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಕ್ರಿಯಿಸಿದ ಬ್ಯಾನರ್ಜಿ,ಟಿಎಂಸಿ ಸರಕಾರವು ಈಗಾಗಲೇ ನಿರಾಶ್ರಿತರ ಕಾಲನಿಗಳ ನಿವಾಸಿಗಳಿಗೆ ಭೂ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಈ ಕಾಲನಿಗಳನ್ನು ಕ್ರಮಬದ್ಧಗೊಳಿಸಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News