ಮತ ಚಲಾಯಿಸದ ಸಂಸದ ಜಯಂತ್ ಸಿನ್ಹಾಗೆ ಬಿಜೆಪಿ ಶೋಕಾಸ್ ನೋಟಿಸ್
ಹೊಸದಿಲ್ಲಿ: ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಜಯಂತ್ ಸಿನ್ಹಾ ಅವರು ಸೋಮವಾರ ಮತ ಚಲಾವಣೆ ಮಾಡದ ಹಿನ್ನೆಲೆಯಲ್ಲಿ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದೆ.
ಜಾರ್ಖಂಡ್ ನ ಹಝಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಬಳಿಕ "ಸಾಂಸ್ಥಿಕ ಕಾರ್ಯ ಮತ್ತು ಚುನಾವಣಾ ಪ್ರಚಾರ"ದಲ್ಲಿ ಕೂಡಾ ಪಾಲ್ಗೊಂಡಿಲ್ಲ ಎಂದು ಶೋಕಾಸ್ ನೋಟಿಸ್ ನಲ್ಲಿ ಹೇಳಲಾಗಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಸಿನ್ಹಾ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಈ ಪ್ರತಿಷ್ಠಿತ ಕ್ಷೇತ್ರವನ್ನು ಪ್ರಸ್ತುತ ಅವರು ಪ್ರತಿನಿಧಿಸುತ್ತಿದ್ದಾರೆ.
"ಹಝಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ ನೀವು ಸಾಂಸ್ಥಿಕ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಆಸಕ್ತಿಯನ್ನು ಕೂಡಾ ತೋರಿಸಿಲ್ಲ. ಮತ ಚಲಾಯಿಸಬೇಕು ಎಂಬ ಭಾವನೆ ಕೂಡಾ ನಿಮಗೆ ಬಂದಿಲ್ಲ. ನಿಮ್ಮ ನಡತೆಯಿಂದ ಪಕ್ಷದ ಘನತೆಗೆ ಧಕ್ಕೆ ಬಂದಿದೆ" ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ನೋಟಿಸ್ನಲ್ಲಿ ಹೇಳಿದ್ದಾರೆ.
ಎರಡು ದಿನಗಳ ಒಳಗಾಗಿ ತಮ್ಮ ನಿಲುವನ್ನು ಪಕ್ಷದ ವರಿಷ್ಠರಿಗೆ ತಿಳಿಸುವಂತೆ ಸೂಚಿಸಲಾಗಿದೆ. ಆದರೆ 61 ವರ್ಷ ವಯಸ್ಸಿನ ಸಿನ್ಹಾ ಇದುವರೆಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಾರ್ಚ್ 2ರಂದು ಎಕ್ಸ್ ಪೋಸ್ಟ್ ಮಾಡಿದ್ದ ಸಿನ್ಹಾ, ಭಾರತ ಮತ್ತು ವಿಶ್ವಾದ್ಯಂತ ಜಾಗತಿಕ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೆ ಗಮನ ಹರಿಸಲು ಬಯಸಿರುವುದರಿಂದ ತಮ್ಮನ್ನು ಚುನಾವಣೆಗೆ ಸಂಬಂಧಿಸಿದ ನೇರ ಕರ್ತವ್ಯಗಳಿಂದ ಬಿಡುಗಡೆ ಮಾಡಬೇಕು ಎಂದು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಕೋರಿದ್ದರು.
ಇದಾದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಜೈಸ್ವಾಲ್ ಅವರನ್ನು ಜಾರ್ಖಂಡ್ ನ ಹಝಾರಿಬಾಗ್ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತ್ತು. ಯಶ್ವಂತ್ ಸಿನ್ಹಾ ಹಾಗೂ ಅವರ ಪುತ್ರ ಜಯಂತ್ ಸಿನ್ಹಾ ಈ ಕ್ಷೇತ್ರಗಳನ್ನು ಮೊದಲು ಪ್ರತಿನಿಧಿಸಿದ್ದರು.
ಇದೇ ರೀತಿ ಮತ್ತೊಬ್ಬ ಸಂಸದ ಗೌತಮ್ ಗಂಭೀರ್ ಕೂಡಾ ಕ್ರಿಕೆಟ್ ಹೊಣೆಗಾರಿಕೆಗಳ ಕಾರಣ ನೀಡಿ ರಾಜಕೀಯ ಕರ್ತವ್ಯಗಳಿಂದ ಬಿಡುಗಡೆ ಮಾಡುವಂತೆ ಕೋರಿದ್ದರು.