ಹರಿಯಾಣ ವಿಧಾನಸಭಾ ಚುನಾವಣೆ | ಹಲವು ಸಚಿವರು, ಶಾಸಕರಿಗೆ ಬಿಜೆಪಿ ಟಿಕೆಟ್ ನಿರಾಕರಿಸುವ ಸಾಧ್ಯತೆ

Update: 2024-08-24 05:44 GMT
Photo: PTI

ಚಂಡೀಗಢ: ಮುಂಬರುವ ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಸವಾಲು ಎದುರಿಸಲು ಸಿದ್ಧವಾಗಿರುವ ಬಿಜೆಪಿ ಪಕ್ಷವು, ಟಿಕೆಟ್ ಘೋಷಿಸುವಾಗ ಸಾಕಷ್ಟು ಸಿದ್ಧತೆಗಳನ್ನು ನಡೆಸಲಿದೆ ಎನ್ನಲಾಗಿದೆ.

ಮೊದಲ ಭಾಗವಾಗಿ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸಂಪುಟದ ಕೆಲವು ಸಚಿವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಹಲವರಿಗೆ ಸುಳಿವು ಸಿಕ್ಕಿದ್ದು, ಅವರು ಅದನ್ನು ಎದುರಿಸಲು ಸಿದ್ಧರಾಗಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಮುಖ್ಯಮಂತ್ರಿ ಸೈನಿ ಅವರು ಮೂರು ಕ್ಷೇತ್ರಗಳಲ್ಲಿ ಒಂದನ್ನು ಸ್ಪರ್ಧಿಸಲು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಅವರು ಲಾಡ್ವಾ, ನರಂಗಢ ಅಥವಾ ಕರ್ನಾಲ್ ನ ಯಾವುದಾದರು ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

ಬಿಜೆಪಿಯ ರಾಜ್ಯ ಚುನಾವಣಾ ಸಮಿತಿಯ ಎರಡು ದಿನಗಳ ಚಿಂತನ ಮಂಥನ ಶುಕ್ರವಾರ ಕೊನೆಗೊಂಡಿದೆ. ಅಕ್ಟೋಬರ್ 1 ರಂದು ನಡೆಯಲಿರುವ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷವು ಈಗಾಗಲೇ ಸಿದ್ಧಪಡಿಸಿದೆ. ಅಂತಿಮ ನಿರ್ಧಾರಕ್ಕಾಗಿ ಆಗಸ್ಟ್ 24-25 ಕ್ಕೆ ಪಕ್ಷದ ಹೈಕಮಾಂಡ್ ಮುಂದೆ ಇಡುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಶಾಸಕರ ಹೆಸರನ್ನು ಸೇರಿಸಲಾಗಿದೆ. ಅವರಲ್ಲಿ ಸುಮಾರು ಹತ್ತು ಮಂದಿಗೆ ಪಕ್ಷದ ಟಿಕೆಟ್ ಖಚಿತವಾಗಿದೆ ಎಂದು ತಿಳಿದುಬಂದಿದೆ.

ಈ ಬಾರಿ ಪಕ್ಷವು ಚುನಾವಣೆಗೆ 10-15 ಹೊಸ ಮುಖಗಳನ್ನು ಹುಡುಕುತ್ತಿದೆ. ಪ್ರಮುಖರು ಸ್ಪರ್ಧಿಸುವ ಕೆಲವು ಕ್ಷೇತ್ರಗಳನ್ನು ಹೊರತುಪಡಿಸಿ, ಪ್ರತಿ ಕ್ಷೇತ್ರಕ್ಕೆ ಎರಡರಿಂದ ಮೂರು ಸಂಭಾವ್ಯ ಅಭ್ಯರ್ಥಿಗಳನ್ನು ಪಕ್ಷವು ಈಗಾಗಲೇ ಸಿದ್ಧಪಡಿಸಿಟ್ಟುಕೊಂಡಿದೆ. ಕಳೆದ ಹತ್ತು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯೂ ವರಿಷ್ಠರ ಗಮನಕ್ಕೆ ಬಂದಿದೆ. ಹಾಗಾಗಿ ವಿರೋಧಿ ಅಲೆಯ ವಿರುದ್ಧ ಹೋರಾಡಲು ಹೊಸ ಮುಖಗಳನ್ನು ಹಲವಾರು ಸ್ಥಾನಗಳಿಂದ ಕಣಕ್ಕಿಳಿಸಲಾಗುವುದು ಎಂದು ಪಕ್ಷವು ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯು ಈ ಬಾರಿ "ಒಂದು ಕುಟುಂಬ, ಒಂದು ಟಿಕೆಟ್" ಎಂಬ ನಿಯಮವನ್ನು ಅನುಸರಿಸದಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಪಕ್ಷದ ನಾಯಕರ ಸಂಬಂಧಿಕರಿಗೆ ಟಿಕೆಟ್ ನೀಡಬಹುದು ಎಂದು ತಿಳಿದುಬಂದಿದೆ. ಈ ಚುನಾವಣೆಗಳಲ್ಲಿ ಒಂದು ಬಾರಿಗೆ ಈ ನೀತಿಯನ್ನು ಬದಿಗಿಟ್ಟು ಚುನಾವಣೆ ಎದುರಿಸುವಂತೆ ಪಕ್ಷದ ಕೆಲವು ಹಿರಿಯ ನಾಯಕರು ಪಕ್ಷದ ಹೈಕಮಾಂಡ್‌ ಕದ ತಟ್ಟಿದ್ದಾರೆ ಎನ್ನಲಾಗಿದೆ.

ಕೇಂದ್ರ ಸಚಿವ ರಾವ್ ಇಂದರ್‌ಜಿತ್ ಸಿಂಗ್ ಅವರು ತಮ್ಮ ಪುತ್ರಿ ಆರತಿ ರಾವ್‌ಗೆ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷದ ಟಿಕೆಟ್‌ನೊಂದಿಗೆ ಅಥವಾ ಇಲ್ಲದೆಯೇ ಈ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಈಗಾಗಲೇ ಅವರು ಘೋಷಿಸಿದ್ದಾರೆ. ಸಂಸದ ನವೀನ್ ಜಿಂದಾಲ್ ಅವರ ತಾಯಿ ಸಾವಿತ್ರಿ ಜಿಂದಾಲ್‌ಗೆ ಟಿಕೆಟ್‌ಗಾಗಿ ಉತ್ಸುಕರಾಗಿದ್ದಾರೆ. ಮತ್ತೊಬ್ಬ ಕೇಂದ್ರ ಸಚಿವ ಕ್ರಿಶನ್ ಪಾಲ್ ಗುಜ್ಜರ್ ಮತ್ತು ಸಂಸದ ಧರಂಬೀರ್ ಸಿಂಗ್ ತಮ್ಮ ಮಕ್ಕಳಿಗೆ ಟಿಕೆಟ್ ಬಯಸಿದ್ದಾರೆ. ರಾಜ್ಯಸಭಾ ನಾಮನಿರ್ದೇಶಿತ ಕಿರಣ್ ಚೌಧರಿ ಕೂಡ ತಮ್ಮ ಪುತ್ರಿ ಶೃತಿಗೆ ಟಿಕೆಟ್ ನೀಡಲು ಉತ್ಸುಕರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News