ಲೋಕಸಭಾ ಚುನಾವಣೆ: ಬಿಜೆಪಿ ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದ ಶಶಿ ತರೂರ್

Update: 2024-01-15 07:32 GMT

ಶಶಿ ತರೂರ್ (PTI)

ತಿರುವನಂತಪುರಂ: 2024ರ ಚುನಾವಣೆಯಲ್ಲಿ ಬಿಜೆಪಿ ಬಹು ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ರವಿವಾರ ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ ಎಂದು Hindustan Times ಸುದ್ದಿ ಸಂಸ್ಥೆ ವರದಿ ಮಾಡಿದೆ.

ಆದರೆ, ಬಿಜೆಪಿಯ ಸ್ಥಾನಗಳ ಸಂಖ್ಯೆಯನ್ನು ಗಮನಾರ್ಹವಾಗಿ ಇಳಿಕೆ ಮಾಡುವ ಮೂಲಕ ಬಿಜೆಪಿಯು ಸರ್ಕಾರವನ್ನು ರಚಿಸುವುದರಿಂದ ತಡೆಯಬಹುದಾಗಿದೆ. ಆಗ ಬಿಜೆಪಿಯ ಮೈತ್ರಿ ಪಕ್ಷಗಳು ಎನ್‍ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡಲು ಬಯಸುವುದಿಲ್ಲ. ಬದಲಿಗೆ, ಅವು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಲಿವೆ ಎಂದು ಶಶಿ ತರೂರ್ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ಆಯೋಜನೆಗೊಂಡಿದ್ದ ಕೇರಳ ಸಾಹಿತ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ತರೂರ್, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಸಾಕಷ್ಟು ಸಂಖ್ಯೆಯ ರಾಜ್ಯಗಳಲ್ಲಿ ಸ್ಥಾನ ಹಂಚಿಕೆಯ ಒಪ್ಪಂದಕ್ಕೆ ಬರುವುದು ಸಾಧ್ಯವಾದರೆ, ಕೆಲವು ಕ್ಷೇತ್ರಗಳಲ್ಲಿ ಸೋಲನ್ನು ತಡೆಯಬಹುದಾಗಿದೆ ಎಂದೂ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ 543 ಸ್ಥಾನಗಳ ಪೈಕಿ ಬಿಜೆಪಿ 303 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಗೆಲುವು ಸಾಧಿಸಲಷ್ಟೇ ಶಕ್ತವಾಗಿತ್ತು. ಯಾವುದೇ ಪಕ್ಷ ಅಥವಾ ಮೈತ್ರಿಕೂಟವು ಲೋಕಸಭೆಯಲ್ಲಿ ಬಹುಮತ ಪಡೆಯಬೇಕಿದ್ದರೆ 272 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದೆ.

ಈ ನಡುವೆ, ಈ ಬಾರಿ 400 ಸ್ಥಾನಗಳ ಗಡಿಯನ್ನು ದಾಟುವ ಗುರಿಯನ್ನು ಬಿಜೆಪಿ ನೇತೃತ್ವದ ಮೈತ್ರಿಕೂಟವು ಹೊಂದಿದೆ. ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟವನ್ನು ಎದುರಿಸಲು ಕಾಂಗ್ರೆಸ್ ಮತ್ತು ಇತರ 27 ವಿರೋಧ ಪಕ್ಷಗಳು ಇಂಡಿಯಾ ಮೈತ್ರಿ ಕೂಟವನ್ನು ರಚಿಸಿಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News