ಅಯೋಧ್ಯೆಯ ಬಳಿಕ ಬದ್ರಿನಾಥ್ ನಲ್ಲೂ ಸೋತ ಬಿಜೆಪಿ!

Update: 2024-07-13 15:38 GMT

ಉತ್ತರಾಖಂಡದ ಬದ್ರಿನಾಥ್ |  PC : PTI 

ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರ ಉತ್ತರಾಖಂಡದ ಬದ್ರಿನಾಥ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿದೆ. ಕಾಂಗ್ರೆಸ್ ಅಲ್ಲಿ ಗೆದ್ದು ಬೀಗಿದೆ. ಬಿಜೆಪಿಯು ಅಯೋಧ್ಯೆ ಸೋಲಿನ ಹೆಸರಲ್ಲಿ ಎದುರಿಸಿದ ಟೀಕೆ ಇನ್ನೂ ನಿಂತಿಲ್ಲ. ಅಷ್ಟರಲ್ಲೇ ಬಿಜೆಪಿಗೆ ಇನ್ನೊಂದು ಆಘಾತಕಾರಿ ಫಲಿತಾಂಶ ಎದುರಾಗಿದೆ.

ಮಿತ್ರಪಕ್ಷಗಳ ಆಸರೆಯಲ್ಲಿ ಮೂರನೇ ಬಾರಿ ಕೇಂದ್ರದಲ್ಲಿ ಸರಕಾರ ರಚಿಸಿದ್ದರೂ ಬಿಜೆಪಿಗೆ ಹಿಂದೂ ಪುಣ್ಯ ಕ್ಷೇತ್ರಗಳಲ್ಲಿ ಹಿನ್ನಡೆಯಾಗುವ ಟ್ರೆಂಡ್ ನಿಲ್ಲುತ್ತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಳೆದುಕೊಂಡ ಉಳಿದ 62 ಸೀಟುಗಳದ್ದೇ ದೊಡ್ಡ ಚರ್ಚೆಯಾದರೆ, ಅಯೋಧ್ಯೆಯಿರುವ ಫೈಝಾಬಾದ್ ನ ಸೋಲು ಅದಕ್ಕೆ ತೀವ್ರ ಮುಖಭಂಗ ತಂದಿತ್ತು.

ವಿಧಾನಸಭೆ ಉಪಚುನಾವಣೆಯಲ್ಲಿ ಉತ್ತರಾಖಂಡದ ಆಡಳಿತಾರೂಢ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ. ಬದ್ರಿನಾಥದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಲಖಪತ್ ಸಿಂಗ್ ಬುಟೋಲಾ ಅವರು 3.5 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಉತ್ತರಾಖಂಡದ ಬದರಿನಾಥ್ ಮತ್ತು ಮಂಗ್ಲೋರ್ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಈ ಕುರಿತು ಎಕ್ಸ್‌ ನಲ್ಲಿ ಪೋಸ್ಟ್‌ ಮಾಡಿರುವ ಶಿವಸೇನೆಯ (ಯುಬಿಟಿ) ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ, ‘ಜೈಬಾಬಾ ಬದರಿನಾಥ್, ನಾನ್ ಬಯೋಲಾಜಿಕಲ್ ರವರ ಪಕ್ಷ ಇಲ್ಲೂ ಸೋತಿದೆ’ ಎಂದು ಬಿಜೆಪಿಯನ್ನು ಕುಟುಕಿದ್ದಾರೆ. ಬದರಿನಾಥ್ ಕ್ಷೇತ್ರದಲ್ಲಿ 2022 ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದಿದ್ದ ಶಾಸಕ ರಾಜೇಂದ್ರ ಸಿಂಗ್ ಭಂಡಾರಿ ಬಿಜೆಪಿ ಸೇರಿದ ಕಾರಣ ಅಲ್ಲಿ ಉಪಚುನಾವಣೆ ಅನಿವಾರ್ಯವಾಗಿತ್ತು.

ಲೋಕಸಭಾ ಚುನಾವಣೆಗಳ ಫಲಿತಾಂಶ ಜೂ.4ರಂದು ಬಂತು. ನೂತನ ರಾಮಮಂದಿರ ಇರುವ ಅಯೋಧ್ಯೆಯನ್ನು ಒಳಗೊಂಡ ಫೈಝಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅವಧೇಶ ಪ್ರಸಾದ್ ಅವರು ಬಿಜೆಪಿಯ ಸಂಸದ ಲಲ್ಲು ಸಿಂಗ್ ಅವರನ್ನು ಸೋಲಿಸಿದ್ದರು. ಲಲ್ಲು ಸಿಂಗ್ 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದರು.

ಬಿಜೆಪಿ ಫೈಝಾಬಾದ್‌ನಲ್ಲಿ ಸೋತದ್ದು ಮಾತ್ರವಲ್ಲ, ಅಯೋಧ್ಯೆ ಪ್ರದೇಶದ ಒಂಭತ್ತು ಲೋಕಸಭಾ ಸ್ಥಾನಗಳ ಪೈಕಿ ಐದನ್ನು ಕಳೆದುಕೊಂಡಿತ್ತು. ಮೇನಕಾ ಗಾಂಧಿ ಸ್ಪರ್ಧಿಸಿದ್ದ ಸುಲ್ತಾನ್‌ಪುರ, ಬಸ್ತಿ, ಅಂಬೇಡ್ಕರ್ ನಗರ ಮತ್ತು ಶ್ರಾವಸ್ಥಿ ಕ್ಷೇತ್ರಗಳಲ್ಲಿಯೂ ಬಿಜೆಪಿ ಸೋತಿತ್ತು. ಈ ನಾಲ್ಕೂ ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಶ್ರಾವಸ್ಥಿಯಲ್ಲಿ ಸೋತಿದ್ದ ಬಿಜೆಪಿ ಅಭ್ಯರ್ಥಿ ಸಾಕೇತ ಮಿಶ್ರಾ ನೂತನ ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾರ ಪುತ್ರ.

ಇನ್ನೊಂದು ಪುಣ್ಯ ಕ್ಷೇತ್ರ ವಾರಣಾಸಿಯ ಸುತ್ತಮುತ್ತಲಿನ ಕ್ಷೇತ್ರಗಳಲ್ಲೂ ಬಿಜೆಪಿಗೆ ಇದೆ ಸ್ಥಿತಿ ಬಂದಿತ್ತು. ವಾರಣಾಸಿ, ಭದೋಹಿ, ಚಂದೌಲಿ, ಮಿರ್ಝಾಪುರ, ರಾಬರ್ಟ್ಸ್‌ಗಂಜ್, ಘಾಝಿಪುರ, ಜೌನಪುರ, ಮಛ್ಲಿಶಹರ್, ಘೋಸಿ, ಅಜಮ್‌ಗಡ, ಲಾಲಗಂಜ್ ಮತ್ತು ಬಲ್ಲಿಯಾ ಸೇರಿದಂತೆ ವಾರಣಾಸಿ ಪ್ರದೇಶದ 12 ಸ್ಥಾನಗಳ ಪೈಕಿ ಒಂಭತ್ತನ್ನು ಬಿಜೆಪಿ ಕಳೆದುಕೊಂಡಿತ್ತು. ಬಿಜೆಪಿ ಈ ಪ್ರದೇಶದಲ್ಲಿ ಗೆದ್ದಿರುವ ಮೂರು ಸ್ಥಾನಗಳಲ್ಲಿ ವಾರಣಾಸಿ,ಮಿರ್ಝಾಪುರ ಮತ್ತು ಭದೋಹಿ ಸೇರಿವೆ.

ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೆದ್ದರೂ ಅವರ ಗೆಲುವಿನ ಅಂತರ 1.5 ಲಕ್ಷ ಮತಗಳಿಗೆ ಕುಸಿದಿತ್ತು. "ಬ್ರಾಂಡ್ ಮೋದಿ ದೇಶದಲ್ಲೆಡೆ ವಿಫಲವಾಗಿಬಿಟ್ಟಿದೆ ಎಂದು ಈ ಚುನಾವಣಾ ಫಲಿತಾಂಶ ಹೇಳುತ್ತಿದೆ. ಬಿಜೆಪಿ ಮತ್ತೆ ಸೋತು ಸುಣ್ಣವಾಗಿದೆ. ಧರ್ಮದ ದುರುಪಯೋಗ ಮತ್ತು ಧರ್ಮದ ಹೆಸರಲ್ಲಿ ರಾಜಕೀಯವನ್ನು ಜನರು ತಿರಸ್ಕರಿಸಿದ್ದಾರೆ. ಜನರು ನಿರುದ್ಯೋಗ, ಬೆಲೆ ಏರಿಕೆ, ಮಣಿಪುರ, ಚೀನಾ ಅತಿಕ್ರಮಿಸಿದ ಭೂಮಿ, ಈ ರೀತಿಯ ಪ್ರಶ್ನೆಗಳ ಬಗ್ಗೆ ಈಗ ಉತ್ತರ ಬಯಸುತ್ತಿದೆ " ಎಂದು ಕಾಂಗ್ರೆಸ್ ಹೇಳಿದೆ.

ಇದೀಗ ಬದರಿನಾಥ್ ವಿಧಾನ ಸಭೆ ಉಪಚುನಾವಣೆ ಫಲಿತಾಂಶ ಬಂದಿದ್ದು ಜನರು ಬಿಜೆಪಿಯ ಕೋಮುವಾದ ರಾಜಕೀಯವನ್ನು ತಿರಸ್ಕರಿಸುತ್ತಿರುವುದರ ಸಂಕೇತ ಇದು ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News