ಕೇಜ್ರಿವಾಲ್ ಜೀವದೊಂದಿಗೆ ಆಟವಾಡುತ್ತಿರುವ ಬಿಜೆಪಿ, ಲೆಫ್ಟಿನೆಂಟ್ ಗವರ್ನರ್: ಆಪ್ ಆರೋಪ
ಹೊಸದಿಲ್ಲಿ : ಬಿಜೆಪಿ ಹಾಗೂ ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜೀವದೊಂದಿಗೆ ಆಟವಾಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ರವಿವಾರ ಆರೋಪಿಸಿದೆ.
ಬಿಜೆಪಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆಪ್ ಹೇಳಿದೆ.
ಅರವಿಂದ್ ಕೇಜ್ರಿವಾಲ್ ಆವರನ್ನು ಕಾರಾಗೃಹದಲ್ಲಿ ಹತ್ಯೆಗೈಯಲು ಬಿಜೆಪಿ ಹಾಗೂ ಲೆಫ್ಟಿನೆಂಟ್ ಗವರ್ನರ್ ಪಿತೂರಿ ನಡೆಸುತ್ತಿದ್ದಾರೆ. ಬಿಜೆಪಿ ತಿಹಾರ್ ಕಾರಾಗೃಹದಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯದೊಂದಿಗೆ ಆಟವಾಡುತ್ತಿದ್ದಾರೆ ಎಂದು ಆಪ್ ರಾಜ್ಯ ಸಭಾ ಸದಸ್ಯ ಸಂಜಯ್ ಸಿಂಗ್ ಆರೋಪಿಸಿದ್ದಾರೆ.
ಕೇಜ್ರಿವಾಲ್ ಅವರಿಗೆ ಯಾವುದೇ ಸಮಯದಲ್ಲಿ, ಏನು ಕೂಡ ಸಂಭವಿಸಬಹುದು ಎಂದು ಅವರ ವೈದ್ಯಕೀಯ ವರದಿ ಹೇಳುತ್ತದೆ. ಬಿಜೆಪಿ ಕೇಜ್ರಿವಾಲ್ ಅವರ ಆರೋಗ್ಯದೊಂದಿಗೆ ಆಟವಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಬಿಜೆಪಿ ಕೇಜ್ರಿವಾಲ್ ಸಿಹಿತಿಂಡಿ ತಿನ್ನುತ್ತಿದ್ದಾರೆ ಹಾಗೂ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ಈಗ ಕೇಜ್ರಿವಾಲ್ ಅವರು ತೆಗೆದುಕೊಳ್ಳುತ್ತಿರುವ ಆಹಾರದ ಪ್ರಮಾಣ ಕಡಿಮೆ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರು ಯಾಕಾಗಿ ಇದನ್ನು ಮಾಡಬೇಕು. ತಮ್ಮ ಬದುಕನ್ನು ಅಪಾಯಕ್ಕೆ ಒಡ್ಡಬೇಕು ? ಎಂದು ಸಿಂಗ್ ಪ್ರಶ್ನಿಸಿದ್ದಾರೆ.
ಕೇಜ್ರಿವಾಲ್ ಅವರು ಉದ್ದೇಶಪೂರ್ವಕವಾಗಿ ತನ್ನನ್ನು ತಾನು ಅನಾರೋಗ್ಯಕ್ಕೆ ದೂಡುತ್ತಿದ್ದಾರೆ ಎಂಬ ಲೆಫ್ಟಿನೆಂಟ್ ಜನರಲ್ ವಿ.ಕೆ. ಸಕ್ಸೇನಾ ಅವರ ಹೇಳಿಕೆ ಕುರಿತಂತೆ ಆಮ್ ಆದ್ಮಿ ಪಕ್ಷ ಶನಿವಾರ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು ಹಾಗೂ ಕೇಜ್ರಿವಾಲ್ ಅವರನ್ನು ಹತ್ಯೆಗೈಯಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ಆರೋಪಿಸಿತ್ತು.