ಕ್ರಿಕೆಟಿಗ ಮುಹಮ್ಮದ್‌ ಶಮಿ ಅವರನ್ನು ಪಶ್ಚಿಮ ಬಂಗಾಳದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ?

Update: 2024-03-08 05:40 GMT

ಮುಹಮ್ಮದ್‌ ಶಮಿ (Photo: PTI)

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಕ್ರಿಕೆಟಿಗ ಮುಹಮ್ಮದ್‌ ಶಮಿ ಅವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆಯಿದೆ ಎಂದು ಮೂಲಗಳನ್ನಾಧರಿಸಿ indiatoday.in ವರದಿ ಮಾಡಿದೆ.

ರಣಜಿ ಟ್ರೋಫಿ ಪಂದ್ಯಾಟದಲ್ಲಿ ಶಮಿ ಅವರು ಪಶ್ಚಿಮ ಬಂಗಾಳವನ್ನು ಪ್ರತಿನಿಧಿಸುತ್ತಿದ್ದಾರೆ.

ಬಿಜೆಪಿ ನಾಯಕತ್ವ ತನ್ನ ಪ್ರಸ್ತಾವನೆಯನ್ನು ಶಮಿ ಮುಂದಿಟ್ಟಿದೆ ಎಂದು ಹೇಳಲಾಗಿದ್ದು ಅವರು ತಮ್ಮ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಪ್ರಸ್ತುತ ಶಮಿ ಶಸ್ತ್ರಕ್ರಿಯೆಯೊಂದರ ನಂತರ ಚೇತರಿಸುತ್ತಿದ್ದಾರೆ.

ಕಳೆದ ವರ್ಷದ ವಿಶ್ವಕಪ್‌ ಪಂದ್ಯಾವಳಿಯ ನಂತರ ಶಮಿ ಅವರು ಭಾರತ ತಂಡಕ್ಕಾಗಿ ಆಡಿಲ್ಲ. ವಿಶ್ವ ಕಪ್‌ನಲ್ಲಿ ಏಳು ಪಂದ್ಯಗಳಲ್ಲಿ ಒಟ್ಟು 24 ವಿಕೆಟ್‌ಗಳನ್ನು ಶಮಿ ಕಿತ್ತಿದ್ದರು. ವಿಶ್ವಕಪ್‌ ಫೈನಲ್‌ನಲ್ಲಿ ಸೋಲಿನ ನಂತರ ಪ್ರಧಾನಿ ಭಾರತ ತಂಡವನ್ನು ಡ್ರೆಸ್ಸಿಂಗ್‌ ರೂಮ್‌ನಲ್ಲಿ ಭೇಟಿಯಾದ ಸಂದರ್ಭ ಶಮಿ ಅವರನ್ನು ಆಲಂಗಿಸಿದ ಫೋಟೋ ವೈರಲ್‌ ಆಗಿತ್ತು. ಶಮಿ ಅವರು ನಂತರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿಯಾಗಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರು ಶಮಿ ಅವರ ಹುಟ್ಟೂರಾದ ಅಮ್ರೋಹಾದಲ್ಲಿ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣದ ನಿರ್ಧಾರವನ್ನು ಘೋಷಿಸಿದ್ದಾರೆ.

ಶಮಿ ಅವರನ್ನು ಬಂಗಾಳದಲ್ಲಿ ಕಣಕ್ಕಿಳಿಸಿದಲ್ಲಿ ರಾಜ್ಯದ ಅಲ್ಪಸಂಖ್ಯಾತ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಗಳಿಸಲು ಸುಲಭವಾಗಬಹುದೆಂಬ ಅಭಿಪ್ರಾಯ ಪಕ್ಷದಲ್ಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಶಮಿ ಅವರನ್ನು ಬಸೀರ್ಹತ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಇರಾದೆ ಬಿಜೆಪಿಗಿದೆ. ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದ ಸಂದೇಶಖಾಲಿ ಗ್ರಾಮವು ಇದೇ ಲೋಕಸಭಾ ಕ್ಷೇತ್ರದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News