ಕರ್ನಾಟಕದ ಜಾತಿ ಗಣತಿಯನ್ನು ಬಹಿರಂಗಪಡಿಸುವಂತೆ ರಾಹುಲ್ ಗಾಂಧಿಗೆ ಸವಾಲೆಸೆದ ಬಿಜೆಪಿ ಸಂಸದ ನಿಶಿಕಾಂತ್ ದುಬೆ

Update: 2024-08-10 07:06 GMT

ಬಿಜೆಪಿ ಸಂಸದ ನಿಶಿಕಾಂತ್ ದುಬೆ | PTI 

ಹೊಸದಿಲ್ಲಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಒಂದು ವೇಳೆ ಕಾಂಗ್ರೆಸ್ ನಾಯಕರು ಜಾತಿ ಗಣತಿ ಬಗ್ಗೆ ಅಷ್ಟೊಂದು ಬದ್ಧತೆಯುಳ್ಳವರಾಗಿದ್ದರೆ, ಕರ್ನಾಟಕದಲ್ಲಿ ನಡೆದಿರುವ ಜಾತಿ ಗಣತಿಯನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದಿದ್ದಾರೆ.

ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ನಿಶಿಕಾಂತ್ ದುಬೆ, “ನೀವು ಹಿಂದುಳಿದ ವರ್ಗಗಳು ಹಾಗೂ ಬಡವರಿಗೆ ನ್ಯಾಯ ಒದಗಿಸುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದು, ಅದಕ್ಕಾಗಿಯೇ ಜಾತಿ ಗಣತಿ ಕುರಿತು ಮಾತನಾಡುತ್ತಿದ್ದೀರಿ. ಒಂದು ವೇಳೆ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಗೆ ಅಷ್ಟೊಂದು ಧೈರ್ಯವಿದ್ದರೆ, ಕರ್ನಾಟಕದಲ್ಲಿ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಜಾರಿಗೊಳಿಸಲಿ” ಎಂದು ಪಂಥಾಹ್ವಾನ ನೀಡಿದರು.

“ನಿಮಗೆ ಸಾಮರ್ಥ್ಯವಿದ್ದರೆ, ನೀವು 2011ರಿಂದ ಏಕೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಜಾರಿಗೊಳಿಸಲಿಲ್ಲ? ನಿಮಗೆ ಸಾಮರ್ಥ್ಯವಿರುವುದಾದರೆ, ಕಳೆದ ಎರಡು ವರ್ಷಗಳಿಂದ ನಿಮ್ಮ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲೇಕೆ ಸಾಮಾಜಿಕ-ಆರ್ಥಿಕ ಮೀಸಲಾತಿ ಜಾರಿಯಲ್ಲಿಲ್ಲ?” ಎಂದು ಪ್ರಶ್ನಿಸಿದ ದುಬೆ, “ಯಾಕೆಂದರೆ, ಇಸ್ಲಾಂ ಹಾಗೂ ಕ್ರಿಶ್ಚಿಯನ್ ಧರ್ಮ ಜಾತಿಯ ಕುರಿತು ಮಾತನಾಡುವುದಿಲ್ಲ ಎಂಬ ಕಾರಣಕ್ಕೆ ನೀವು ಜಾರಿಗೊಳಿಸಿಲ್ಲ. ಆದರೆ, ಹಿಂಬಾಗಿಲಿನಿಂದ ನೀವು ಕ್ರಿಶ್ಚಿಯನ್ ಧರ್ಮದ 86 ಜಾತಿಗಳು ಹಾಗೂ ಇಸ್ಲಾಂ ಧರ್ಮದ 56 ಜಾತಿಗಳಿಗೆ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ನೀಡಲು ಬಯಸುತ್ತಿದ್ದೀರಿ” ಎಂದು ಅವರು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹಲವಾರು ದಶಕಗಳಿಂದ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿರೋಧಿಸುತ್ತಾ ಬರುತ್ತಿದ್ದು, ತನ್ನ ಪಕ್ಷದ ವತಿಯಿಂದ ಮಧ್ಯಪ್ರದೇಶ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಇದುವರೆಗೂ ಇತರೆ ಹಿಂದುಳಿದ ವರ್ಗಗಳ ಮುಖ್ಯಮಂತ್ರಿಯನ್ನು ನೇಮಿಸಿಲ್ಲ ಎಂದೂ ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News