ರಾಷ್ಟ್ರೀಯ ಪಕ್ಷಗಳಿಗೆ ಕಾರ್ಪೊರೇಟ್‌ ದೇಣಿಗೆಗಳ ಪೈಕಿ ಶೇ. 90ರಷ್ಟು ಬಿಜೆಪಿ ಪಾಲು

Update: 2024-02-15 10:10 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಆರ್ಥಿಕ ವರ್ಷ 2022-23ರಲ್ಲಿ ದೇಶದ ಐದು ರಾಷ್ಟ್ರೀಯ ಪಕ್ಷಗಳು ಒಟ್ಟು ಪಡೆದ ರೂ 680.49 ಕೋಟಿ ಮೌಲ್ಯದ ಕಾರ್ಪೊರೇಟ್‌ ದೇಣಿಗೆಗಳ ಪೈಕಿ ಸುಮಾರು ಶೇ90ರಷ್ಟು ದೇಣಿಗೆಗಳನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್)‌ ವರದಿ ಹೇಳಿದೆ.

ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಿವರಗಳ ಆಧಾರದಲ್ಲಿ ರೂ 20,000ಕ್ಕಿಂತ ಹೆಚ್ಚಿನ ಮೊತ್ತದ ದೇಣಿಗೆಗಳನ್ನು ಈ ವರದಿ ಗಣನೆಗೆ ತೆಗೆದುಕೊಂಡಿದೆ. ಬಿಜೆಪಿ ಹೊರತಾಗಿ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌, ಬಹುಜನ್‌ ಸಮಾಜ ಪಕ್ಷ, ಆಮ್‌ ಆದ್ಮಿ ಪಕ್ಷ ಹಾಗೂ ಸಿಪಿಐ(ಎಂ) ಮತ್ತು ನ್ಯಾಷನಲ್ಸ್‌ ಪೀಪಲ್ಸ್‌ ಪಾರ್ಟಿ ಪಡೆದ ದೇಣಿಗೆಗಳ ಕುರಿತು ಈ ವರದಿ ಉಲ್ಲೇಖಿಸಿದೆ.

ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಒಟ್ಟು ದೇಣಿಗೆಗಳ ಮೊತ್ತ 2022-23ರಲ್ಲಿ ರೂ 850.438 ಕೋಟಿ ಆಗಿತ್ತು. ಬಿಜೆಪಿ ನೀಡಿದ ವಿವರಗಳಂತೆ ಪಕ್ಷ ರೂ 719.858 ಕೋಟಿ ದೇಣಿಗೆಗಳನ್ನು ಪಡೆದಿದ್ದರೆ ಕಾಂಗ್ರೆಸ್‌ ರೂ 79.924 ಕೋಟಿ ದೇಣಿಗೆ ಪಡೆದಿದೆ.

ಬಿಜೆಪಿ ಪಡೆದ ಕಾರ್ಪೊರೇಟ್‌ ದೇಣಿಗೆಗಳು ಇತರ ನಾಲ್ಕು ಪಕ್ಷಗಳು ಪಡೆದ ಒಟ್ಟು ದೇಣಿಗೆಗಳ ಐದು ಪಟ್ಟಿಗಿಂತಲೂ ಅಧಿಕವಾಗಿದೆ. ಈ ಅವಧಿಯಲ್ಲಿ ತನಗೆ ರೂ 20,000ಕ್ಕಿಂತ ಹೆಚ್ಚಿನ ಮೊತ್ತದ ಯಾವುದೇ ದೇಣಿಗೆಗಳು ದೊರಕಿಲ್ಲ ಎಂದು ಬಿಎಸ್‌ಪಿ ಹೇಳಿತ್ತು.

ಆರ್ಥಿಕ ವರ್ಷ 2021-22ರಲ್ಲಿ ಬಿಜೆಪಿ ಪಡೆದ ದೇಣಿಗೆಗಳು ರೂ 614.626 ಕೋಟಿ ಆಗಿದ್ದರೆ 2022-23ರಲ್ಲಿ ಅದು ರೂ 719.858 ಕೋಟಿಗೆ ಏರಿಕೆಯಾಗಿದೆ. ಕಾಂಗ್ರೆಸ್‌ ಪಕ್ಷ 2021-22ರಲ್ಲಿ ರೂ 95.459 ಕೋಟಿ ದೇಣಿಗೆ ಪಡೆದಿದ್ದರೆ 2022-23ರಲ್ಲಿ ಅದು ರೂ 79.924 ಕೋಟಿ ಆಗಿತ್ತು.

ರಾಷ್ಟ್ರೀಯ ಪಕ್ಷಗಳಿಗೆ ದಿಲ್ಲಿಯಿಂದ ರೂ 276.202 ಕೋಟಿ ದೇಣಿಗೆ ಹರಿದು ಬಂದಿದ್ದರೆ, ಗುಜರಾತ್‌ನಿಂದ ರೂ 160.509 ಕೋಟಿ ಮತ್ತು ಮಹಾರಾಷ್ಟ್ರದಿಂದ ರೂ 96.273 ಕೋಟಿ ದೇಣಿಗೆ ಬಂದಿತ್ತು. ಒಟ್ಟು ದೇಣಿಗೆಗಳ ಪೈಕಿ ಕಾರ್ಪೊರೇಟ್ ಉದ್ಯಮ ರಂಗದ ದೇಣಿಗೆಗಳು ರೂ 680.495 ಕೋಟಿ (ಶೇ80.017%) ಆಗಿತ್ತು. ಇದರಲ್ಲಿ ಬಿಜೆಪಿಗೆ ರೂ 610.491 ಕೋಟಿ ದೊರಕಿದ್ದರೆ ಕಾಂಗ್ರೆಸ್‌ ಪಕ್ಷಕ್ಕೆ ರೂ 55.625 ಕೋಟಿ ದೇಣಿಗೆ ದೊರಕಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News