ಬಿಜೆಪಿಯ ‘ಸೈದ್ಧಾಂತಿಕ ಪೂರ್ವಜರು ’ಭಾರತೀಯರ ವಿರುದ್ಧ ಬ್ರಿಟಿಷರು ಮತ್ತು ಮುಸ್ಲಿಮ್ ಲೀಗ್‌ನ್ನು ಬೆಂಬಲಿಸಿದ್ದರು : ಖರ್ಗೆ
ಹೊಸದಿಲ್ಲಿ : ಪಕ್ಷದ ಪ್ರಣಾಳಿಕೆಯಲ್ಲಿ ’ಮುಸ್ಲಿಮ್ ಲೀಗ್ ಛಾಪು’ ಕುರಿತು ಟೀಕೆಗಾಗಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಬಿಜೆಪಿಯ ‘ಸೈದ್ಧಾಂತಿಕ ಪೂರ್ವಜರು ’ ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರ ವಿರುದ್ಧ ಬ್ರಿಟಿಷರು ಮತ್ತು ಮುಸ್ಲಿಮ್ ಲೀಗ್‌ನ್ನು ಬೆಂಬಲಿಸಿದ್ದರು ಎಂದು ಹೇಳಿದ್ದಾರೆ.
ಇಂದಿಗೂ ತಮ್ಮ ರಾಜಕೀಯ ಮತ್ತು ಸೈದ್ಧಾಂತಿಕ ಪೂರ್ವಜರ ದಾರಿಯಲ್ಲಿ ನಡೆಯುತ್ತಿರುವ ಮೋದಿ-ಶಾ ಜೋಡಿಗೆ ಸಾಮಾನ್ಯ ಭಾರತೀಯರ ಆಕಾಂಕ್ಷೆಗಳು,ಅಗತ್ಯಗಳು ಮತ್ತು ಬೇಡಿಕೆಗಳಿಗೆ ಅನುಗುಣವಾಗಿ ರೂಪುಗೊಂಡಿರುವ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಮ್ ಲೀಗ್ ಕಾಣುತ್ತಿದೆ ಎಂದು ಖರ್ಗೆ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ತನ್ನ ಪ್ರಣಾಳಿಕೆಯಲ್ಲಿ ತುಷ್ಟೀಕರಣಕ್ಕಾಗಿ ಕಾಂಗ್ರೆಸ್‌ನ್ನು ದೂರಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ಅದು ಏಕೆ ಬಹುಸಂಖ್ಯಾತರ ವಿರುದ್ಧವಾಗಿದೆ ಎನ್ನುವುದನ್ನು ವಿವರಿಸುವಂತೆ ಕೇಳಿದ್ದರು.
ಮೋದಿ ಮತ್ತು ಶಾ ಅವರ ಸೈದ್ಧಾಂತಿಕ ಪೂರ್ವಜರು 1942ರಲ್ಲಿ ಮಹಾತ್ಮಾ ಗಾಂಧಿಯವರ ‘ಚಲೇಜಾವ್’ ಆಂದೋಲನವನ್ನು ವಿರೋಧಿಸಿದ್ದರು. ಶ್ಯಾಮಪ್ರಸಾದ ಮುಖರ್ಜಿಯವರು ಮುಸ್ಲಿಮ್ ಲೀಗ್‌ನೊಂದಿಗೆ ಸೇರಿಕೊಂಡು ಬಂಗಾಳ, ಸಿಂಧ್ ಮತ್ತು ವಾಯುವ್ಯ ಗಡಿನಾಡು ಪ್ರಾಂತ್ಯದಲ್ಲಿ ಹೇಗೆ ತನ್ನ ಸರಕಾರಗಳನ್ನು ರಚಿಸಿದ್ದರು ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದು ತನ್ನ ಪೋಸ್ಟ್‌ನಲ್ಲಿ ಹೇಳಿರುವ ಖರ್ಗೆ, ಇಂದು ಮೋದಿ-ಶಾ ಮತ್ತು ಅವರ ನಾಮನಿರ್ದೇಶಿತ ಅಧ್ಯಕ್ಷರು ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೋದಿಯವರ ಭಾಷಣಗಳಲ್ಲಿ ಆರೆಸ್ಸೆಸ್‌ನ ಗಬ್ಬು ವಾಸನೆಯಿದೆ. ಬಿಜೆಪಿಯ ಚುನಾವಣಾ ಗ್ರಾಫ್ ದಿನೇದಿನೇ ಇಳಿಯುತ್ತಿದೆ. ಆದ್ದರಿಂದ ಆರೆಸ್ಸೆಸ್ ತನ್ನ ಅತ್ಯುತ್ತಮ ಮಿತ್ರ ಮುಸ್ಲಿಮ್ ಲೀಗ್‌ನ್ನು ನೆನಪಿಸಿಕೊಳ್ಳಲು ಆರಂಭಿಸಿದೆ ಎಂದು ಖರ್ಗೆ ಕುಟುಕಿದ್ದಾರೆ.