2017ರ ಪುಣೆ ಸನ್‌ಬರ್ನ್ ಉತ್ಸವದಲ್ಲಿ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಐವರು ಆರೋಪಿಗಳಿಗೆ ಜಾಮೀನು ಮಂಜೂರು

Update: 2024-08-07 11:02 GMT

ಬಾಂಬೆ ಉಚ್ಚ ನ್ಯಾಯಾಲಯ (PTI)

ಮುಂಬೈ: ಪುಣೆಯಲ್ಲಿ 2017ರಲ್ಲಿ ನಡೆದಿದ್ದ ಸನ್‌ಬರ್ನ್ ಸಂಗೀತೋತ್ಸವದಲ್ಲಿ ಬಾಂಬ್ ದಾಳಿಗೆ ಸಂಚು ರೂಪಿಸಿದ್ದ ಐವರು ಆರೋಪಿಗಳಿಗೆ ಬಾಂಬೆ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಉಚ್ಚ ನ್ಯಾಯಾಲಯವು ಜು.30ರಂದು ಹೊರಡಿಸಿದ್ದ ಜಾಮೀನು ಆದೇಶವನ್ನು ಆ.5ರಂದು ಬಹಿರಂಗಗೊಳಿಸಲಾಗಿದೆ. ಸುಜಿತ ರಂಗಸ್ವಾಮಿ, ಅಮಿತ್ ಬದ್ದಿ, ಗಣೇಶ ಮಿಸ್ಕಿನ್, ಶ್ರೀಕಾಂತ್ ಪಂಗರಕರ್ ಮತ್ತು ಭರತ ಕುರಣೆ ಆರೋಪಿಗಳಾಗಿದ್ದಾರೆ.

ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ಪೀಠವು, ಬಾಂಬ್ ಸ್ಫೋಟದ ಸಂಚು ಕಾರ್ಯಗತಗೊಂಡಿರಲಿಲ್ಲ ಎಂದು ಹೇಳಿದೆ.

ವಿಚಾರಣೆಯಿಲ್ಲದೆ ದೀರ್ಘಾವಧಿಯ ಜೈಲುವಾಸ,‌ ಸಂಚನ್ನು ರುಜುವಾತುಗೊಳಿಸಲು ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆ ಮತ್ತು ಆರೋಪ ಸಿದ್ಧಗೊಳ್ಳುವವರೆಗೆ ನಿರಪರಾಧಿಗಳು ಎಂಬ ಪರಿಗಣನೆ ಇವು ಜಾಮೀನು ಮಂಜೂರು ಮಾಡಲು ಕಾರಣಗಳಾಗಿವೆ. ಪ್ರಾಸಿಕ್ಯೂಷನ್ 417 ಸಾಕ್ಷಿಗಳನ್ನು ಹೆಸರಿಸಿದೆ, ಆದರೆ ಈವರೆಗೆ ಕೇವಲ ಇಬ್ಬರು ಸಾಕ್ಷಿಗಳ ವಿಚಾರಣೆ ನಡೆದಿದ್ದು,ಮೂರನೇ ಸಾಕ್ಷಿ ಪ್ರಸ್ತುತ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಸೆಪ್ಟಂಬರ್‌ನಿಂದ ಪ್ರಾಸಿಕ್ಯೂಷನ್ ಯಾವುದೇ ಸಾಕ್ಷಿಯ ವಿಚಾರಣೆಯನ್ನು ನಡೆಸಿಲ್ಲ. ಇದು ವಿಚಾರಣೆಯು ಸಕಾಲದಲ್ಲಿ ಪೂರ್ಣಗೊಳ್ಳುವ ಬಗ್ಗೆ ಶಂಕೆಯನ್ನು ಮೂಡಿಸಿದೆ ಎಂದು ಪೀಠವು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಭಯೋತ್ಪಾದನೆ ನಿಗ್ರಹ ದಳವು ಐವರು ಆರೋಪಿಗಳನ್ನು 2018ರಲ್ಲಿ ಮುಂಬೈನಲ್ಲಿ ಬಂಧಿಸಿತ್ತು.

ಆರೋಪಿಗಳು ಸನಾತನ ಸಂಸ್ಥಾ ಮತ್ತು ಹಿಂದು ಜನಜಾಗ್ರತಿ ಸಮಿತಿಯ ಸದಸ್ಯರಾಗಿದ್ದು, ಪಾಶ್ಚಾತ್ಯ ಸಂಗೀತ ಮತ್ತು ಸಂಸ್ಕೃತಿಯ ವಿರುದ್ಧ ಬಲವಾದ ಸಂದೆಶವನ್ನು ರವಾನಿಸಲು ಸನ್‌ಬರ್ನ್ ಉತ್ಸವದಲ್ಲಿ ಪೆಟ್ರೋಲ್ ಬಾಂಬ್‌ಗಳು ಮತ್ತು ನಾಡ ಬಾಂಬ್‌ಗಳನ್ನು ಸ್ಫೋಟಿಸಲು ಸಂಚು ರೂಪಿಸಿದ್ದರು ಎಂದು ಪೋಲಿಸರು ಆರೋಪಿಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ, ಸ್ಫೋಟಕಗಳ ಕಾಯ್ದೆ, ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ, ಶಸ್ತ್ರಾಸ್ತ್ರಗಳ ಕಾಯ್ದೆ ಮತ್ತು ಮಹಾರಾಷ್ಟ್ರ ಪೋಲಿಸ್ ಕಾಯ್ದೆಯಡಿ ಆರೋಪಗಳನ್ನು ಹೊರಿಸಲಾಗಿದೆ.

ಆರೋಪಿಗಳು ಸನಾತನ ಸಂಸ್ಥಾ ಪ್ರಕಟಿಸಿರುವ ‘ಕ್ಷಾತ್ರ ಧರ್ಮ ಸಾಧನಾ’ ಪುಸ್ತಕ ಮತ್ತು ಹಿಂದು ರಾಷ್ಟ್ರಸ್ಥಾಪನೆಗೆ ಹಿಂದುಗಳಿಗೆ ಕರೆಗಳಿಂದ ಪ್ರಭಾವಿತರಾಗಿದ್ದರು ಎಂದು ಎಟಿಎಸ್ ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದೆ.

ಪ್ರಕರಣದ ಇನ್ನೋರ್ವ ಆರೋಪಿ ವೈಭವ ರಾವುತ್‌ಗೆ ಉಚ್ಚ ನ್ಯಾಯಾಲಯವು ಅಕ್ಟೋಬರ್‌ನಲ್ಲಿ ಜಾಮೀನು ಮಂಜೂರು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News