ಬಾಂಬೆ ಹೈಕೋರ್ಟ್ ನಿಂದ ಜೆಟ್ ಏರ್ ವೇಸ್ ಸ್ಥಾಪಕನಿಗೆ ಮಧ್ಯಂತರ ಜಾಮೀನು

Update: 2024-05-06 15:08 GMT

ನರೇಶ್ ಗೋಯಲ್ | PC : PTI 

ಹೊಸದಿಲ್ಲಿ : ಬಾಂಬೆ ಹೈಕೋರ್ಟ್ ಸೋಮವಾರ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ರಿಗೆ ವೈದ್ಯಕೀಯ ನೆಲೆಯಲ್ಲಿ ಎರಡು ತಿಂಗಳುಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಅವರನ್ನು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು.

ಒಂದು ಲಕ್ಷ ರೂಪಾಯಿ ಮೊತ್ತದ ಭದ್ರತೆ ಒದಗಿಸುವಂತೆ ಮತ್ತು ವಿಚಾರಣಾ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯದೆ ಮುಂಬೈಯಿಂದ ಹೊರಹೋಗದಂತೆ ನ್ಯಾಯಾಧೀಶ ಎನ್.ಜೆ. ಜಮಾದಾರ್ ತನ್ನ ಆದೇಶದಲ್ಲಿ ಗೋಯಲ್ ಗೆ ಸೂಚಿಸಿದ್ದಾರೆ.

‘‘ಅರ್ಜಿದಾರನನ್ನು ಎರಡು ತಿಂಗಳ ಅವಧಿಗೆ ಮಧ್ಯಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಬೇಕು. ವಿಧಿಸಲಾಗಿರುವ ಎಲ್ಲಾ ಶರತ್ತುಗಳನ್ನು ಅವರು ಪೂರೈಸಬೇಕು’’ ಎಂದು ನ್ಯಾಯಾಧೀಶರು ಹೇಳಿದರು. ತನ್ನ ಪಾಸ್ ಪೋರ್ಟ ನ್ನು ಒಪ್ಪಿಸುವಂತೆಯೂ ನ್ಯಾಯಾಲಯ ಆದೇಶಿಸಿತು.

ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪದಲ್ಲಿ ಗೋಯಲ್ ರನ್ನು ಜಾರಿ ನಿರ್ದೇಶನಾಲಯವು 2023 ಸೆಪ್ಟಂಬರ್ ನಲ್ಲಿ ಬಂಧಿಸಿತ್ತು. ಕೆನರಾ ಬ್ಯಾಂಕ್ ಜೆಟ್ ಏರ್ ವೇಸ್‌ ಗೆ ನೀಡಿರುವ 538.62 ಕೋಟಿ ರೂಪಾಯಿ ಸಾಲವನ್ನು ಅವರು ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

ನಾನು ಮತ್ತು ನನ್ನ ಹೆಂಡತಿ ಅನಿತಾ ಗೋಯಲ್ ಇಬ್ಬರೂ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ವೈದ್ಯಕೀಯ ಮತ್ತು ಮಾನವೀಯ ಆಧಾರದಲ್ಲಿ ಮಧ್ಯಂತರ ಜಾಮೀನು ನೀಡಬೇಕೆಂದು 75 ವರ್ಷದ ಗೋಯಲ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಅವರ ಹೆಂಡತಿಯನ್ನು 2023 ನವೆಂಬರ್ ನಲ್ಲಿ ಬಂಧಿಸಲಾಗಿತ್ತು. ಆದರೆ ಅವರ ವಯಸ್ಸು ಮತ್ತು ವೈದ್ಯಕೀಯ ಸ್ಥಿತಿಗತಿಯನ್ನು ಪರಿಗಣಿಸಿ ಅದೇ ದಿನ ವಿಶೇಷ ನ್ಯಾಯಾಲಯವೊಂದು ಅವರಿಗೆ ಜಾಮೀನು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News