ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ

Update: 2024-08-09 13:15 GMT

                                                                                                            PC : indiatoday.in

ಪಾಟ್ನಾ: ಬಿಹಾರದ ಕಟಿಹಾರ್ ಜಿಲ್ಲೆಯ ಬಕಿಯಾ ಸುಖಾಯ್ ಗ್ರಾಮದಲ್ಲಿ ಗಂಗಾ ನದಿಯ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಗುರುವಾರ ಕುಸಿದು ಬಿದ್ದಿದೆ. ಇದು ಜೂನ್‌ನಿಂದ ರಾಜ್ಯದಲ್ಲಿ ಸಂಭವಿಸಿರುವ 14ನೇ ಸೇತುವೆ ಕುಸಿತದ ಘಟನೆಯಾಗಿದೆ. ಈ ಘಟನೆಗಳಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.

ಗ್ರಾಮೀಣ ಕಾಮಗಾರಿಗಳ ಇಲಾಖೆಯು ಬಕಿಯಾ ಸುಖಾಯ್ ಗ್ರಾಮದಲ್ಲಿ ಮೂರು ಕೋ.ರೂ.ವೆಚ್ಚದಲ್ಲಿ ನಿರ್ಮಿಸುತ್ತಿದ್ದ ಸೇತುವೆ ಶೀಘ್ರವೇ ಉದ್ಘಾಟನೆಗೊಳ್ಳಲಿತ್ತು. ಅದು ಗ್ರಾಮದ ಜನರಿಗೆ ಬ್ಲಾಕ್ ಮುಖ್ಯಕೇಂದ್ರ ಬರಾರಿಗೆ ನೇರ ರಸ್ತೆ ಸಂಪರ್ಕವನ್ನು ಒದಗಿಸಲಿತ್ತು.

ನದಿಯಲ್ಲಿ ನೀರಿನ ರಭಸ ಹೆಚ್ಚಿದ್ದು ಸೇತುವೆಯ ಎರಡು ಸ್ತಂಭಗಳ ಕುಸಿತಕ್ಕೆ ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಮೀನಾ ಸುದ್ದಿಸಂಸ್ಥೆಗೆ ತಿಳಿಸಿದರು.

ನದಿ ಕೊರೆತದಿಂದ ಸ್ತಂಭಗಳು ಕುಸಿದಿವೆ ಎಂದು ಕಟಿಹಾರ್ ನೆರೆ ನಿಯಂತ್ರಣ ವಿಭಾಗದ ಮುಖ್ಯ ಇಂಜಿನಿಯರ್ ಅನ್ವರ್ ಜಮಾಲ್ ಹೇಳಿದರೆ,ಕಳೆದ ಎರಡು ದಿನಗಳಿಂದ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ ಎಂದು ಗ್ರಾಮದ ನಿವಾಸಿಗಳು ತಿಳಿಸಿದರು.

ಬಿಹಾರದಲ್ಲಿ ಈ ವರ್ಷ ಸರಣಿ ಸೇತುವೆ ಕುಸಿತಗಳು ಸಂಭವಿಸಿವೆ. ಜೂನ್ ಮೊದಲ ವಾರದಲ್ಲಿ ಸರನ್ ಜಿಲ್ಲೆಯಲ್ಲಿ ನಿರಂತರ ಮಳೆಯ ನಡುವೆ ಕನಿಷ್ಠ ಮೂರು ಸೇತುವೆಗಳು ಕುಸಿದಿದ್ದವು. ಸಿವಾನ್,ಮಧುಬನಿ,ಅರಾರಿಯಾ,ಪೂರ್ವ ಚಂಪಾರಣ ಮತ್ತು ಕಿಶನಗಂಜ್ ಸೇರಿದಂತೆ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಸೇತುವೆ ಕುಸಿತ ಘಟನೆಗಳು ವರದಿಯಾಗಿದ್ದು,ರಾಜ್ಯ ಸರಕಾರವು ಈ ಕುರಿತು ತನಿಖೆಗಾಗಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News