ಭಾರತ ರತ್ನ ಪುರಸ್ಕೃತರ ಸಂಕ್ಷಿಪ್ತ ಪರಿಚಯ

Update: 2024-02-09 15:28 GMT

ಭಾರತ ರತ್ನ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ , ಚೌಧುರಿ ಚರಣ್ ಸಿಂಗ್ ಹಾಗೂ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನವನ್ನು ಘೋಷಿಸಿದ್ದಾರೆ. ಈ ಮೂವರಿಗೂ ಮರಣೋತ್ತರವಾಗಿ ಭಾರತರತ್ ನವನ್ನು ಪ್ರಕಟಿಸಲಾಗಿದೆ.

ಈ ಮೂವರ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ನೀಡಲಾಗಿದೆ.

ಪಿ.ವಿ.ನರಸಿಂಹ ರಾವ್

ಪಿ.ವಿ.ನರಸಿಂಹ ರಾವ್ ಅವರು ಭಾರತದ ಪ್ರಧಾನಿಯಾಗಿ 1991ರ ಜೂನ್21ರಿಂದ 1996ರ ಮೇ 16ರ ವರೆಗೆ ಕಾರ್ಯನಿರ್ವಹಿಸಿದ್ದರು.

1921ರಲ್ಲಿ ಆಂಧ್ರಪ್ರದೇಶದ ಕರೀಂನಗರ ಜಿಲ್ಲೆಯಲ್ಲಿ ಜನಿಸಿದ ಅವರು, ಹೈದರಾಬಾದ್ನ ಉಸ್ಮಾನಿಯಾ ವಿವಿ, ಬಾಂಬೆ ವಿವಿ ಹಾಗೂ ನಾಗಪುರ ವಿವಿಗಳಲ್ಲಿ ಶಿಕ್ಷಣ ಪಡೆದರು.

ಕೃಷಿಕ ಹಾಗೂ ನ್ಯಾಯವಾದಿಯೂ ಆಗಿದ್ದ ನರಸಿಂಹರಾವ್ ಅವರು ಆಂಧ್ರಪ್ರದೇಶದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಕೂಡಾ ಆಗಿದ್ದರು.

ಪ್ರಧಾನಿಯಾಗುವ ಮುನ್ನ ಪಿ.ವಿ.ನರಸಿಂಹರಾವ್ ಅವರು ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿ ಅವರ ಸಂಪುಟಗಳಲ್ಲಿ ಸಚಿವರಾಗಿದ್ದರು. ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಭಾರತವು ಜಾಗತೀಕರಣದೆಡೆಗೆ ತನ್ನನ್ನು ತೆರೆದುಕೊಂಡಿತ್ತು.

1980ರ ಜನವರಿ 14ರಿಂದ 1984ರ ಜುಲೈ 18ರವರೆಗೆ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1984ರ ಜುಲೈನಿಂದ 1984ರ ಡಿಸೆಂಬರ್ರವರೆಗೆ ಗೃಹ ಸಚಿವರಾಗಿದ್ದರು ಮತ್ತು 1984ರ ಡಿಸೆಂಬರ್ ನಿಂದ ಸೆಪ್ಟೆಂಬರ್ 1985ರವರೆಗೆ ರಕ್ಷಣಾ ಸಚಿವರೂ ಆಗಿದ್ದರು. 2004ರ ಡಿಸೆಂಬರ್ ನಲ್ಲಿ ಅವರು ನಿಧನರಾದರು.

ಚೌಧರಿ ಚರಣ್ ಸಿಂಗ್

ಉತ್ತರಪ್ರದೇಶದ ಮೀರತ್ ನಲ್ಲಿ ಜನಿಸಿದ ಚೌಧರಿ ಚರಣ್ ಸಿಂಗ್ ಅವರು 1979ರ ಜುಲೈ 28ರಿಂದ 1980ರ ಜನವರಿ 14ರವರೆಗೆ ಪ್ರಧಾನಿಯಾಗಿದ್ದರು. 1937ರಲ್ಲಿ ಅವರು ಚಪ್ರೌಲಿ ಕ್ಷೇತ್ರದಿಂದ ವಿಜಯಗಳಿಸುವ ಮೂಲಕ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸಿದರು. 1946,1952,1962 ಹಾಗೂ 1967ರಲ್ಲಿ ಅವರು ತನ್ನ ತನ್ನ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1967 ಹಾಗೂ 1970ರಲ್ಲಿ ಹೀಗೆ ಎರಡು ಬಪಾರಿ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದರು.

ಚರಣ್ ಸಿಂಗ್ ಅವರ ಲೋಕದಳವು 1977ರಲ್ಲಿ ಜನತಾ ಪಕ್ಷದ ಜೊತೆ ವಿಲೀನಗೊಂಡಿತ್ತು. ಆವಾಗಿನ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷವು ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರಿತ್ತು.

ಆದರೆ 1979ರಲ್ಲಿ ಮೊರಾರ್ಜಿ ದೇಸಾಯಿ ನೇತೃತ್ವದ ಜನತಾಪಕ್ಷ ಸರಕಾರವು ಪತನಗೊಂಡಾಗ ಅವರು ಪ್ರಧಾನಿಯಾದರು.

ರೈತ ನಾಯಕನೆಂದೇ ಗುರುತಿಸಲ್ಪಟ್ಟಿದ್ದ ಚರಣ್ ಸಿಂಗ್ ಉತ್ತರಪ್ರದೇಶ ಹಾಗೂ ಹರ್ಯಾಣದಲ್ಲಿ ಪ್ರಭಾವಿ ನಾಯಕರಾಗಿದ್ದರು ಹಾಗೂ ಪ್ರಬಲ ಜಾಟ್ಸಮುದಾಯದ ಬೆಂಬಲವನ್ನು ಗಳಿಸಿದ್ದರು. 1987ರ ಮೇ 29ರಂದು ಅವರು ನಿಧನರಾದರು.

ಎಂ.ಎಸ್.ಸ್ವಾಮಿನಾಥನ್

ಖ್ಯಾತ ಕೃಷಿವಿಜ್ಞಾನಿ ಸ್ವಾಮಿನಾಥನ್ ಅವರು ಭಾರತದ ಹಸಿರು ಕ್ರಾಂತಿಯ ಜನಕನೆಂದೇ ಜನಪ್ರಿಯರಾಗಿದ್ದಾರೆ.

ಮೂಲತಃ ಸ್ವಾಮಿನಾಥನ್ 1925ರಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದರು,.ತಿರುವನಂತಪುರದ ಮಹಾರಾಜ ಕಾಲೇಜ್ ನಲ್ಲಿ ಪ್ರಾಣಿಶಾಸ್ತ್ರವನ್ನು ಅಧ್ಯಯನ ಮಾಡಿದರು. ಕೊಯಮತ್ತೂರು ಕೃಷಿ ಕಾಲೇಜಿನಲ್ಲಿ ಪದವಿಯನ್ನು ಪಡೆದರು.

ಭತ್ತ, ಗೋಧಿ ಹಾಗೂ ಬಟಾಟೆಯ ಸಮೃದ್ಧ ಇಳುವರಿಯನ್ನು ರೈತರು ಪಡೆಯುವಂತೆ ಮಾಡಲು ಹಲವಾರು ತಳಿಗಳನ್ನು ಅವರು ಪರಿಚಯಿಸಿದರು.

ಭಾರತೀಯ ಕೃಷಿ ವಿಜ್ಞಾನ ಸಂಶೋಧನಾ ಸಂಸ್ಥೆ (ಐಎಆರ್ಐ) ಹಾಗೂ ಬ್ರಿಟನ್ನ ಕೇಂಬ್ರಿಜ್ ವಿವಿಯಿಂದ ಅವರು ಕೃಷಿ ವಿಜ್ಞಾನ (ವಂಶವಾಹಿ ತಂತ್ರಜ್ಞಾನ ಹಾಗೂ ಸಸ್ಯ ಸಂತಾನೋತ್ಪತ್ತಿ)ದಲ್ಲಿ ಎಂಎಸ್ಸಿ ಪದವಿ ಪಡೆದರು. ಭಾರತದ ಅರೆಶುಷ್ಕ ಪ್ರದೇಶದ ಬೆಳೆಗಳಿಗಾಗಿನ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ಸ್ಥಾಪನೆಗೂ ಅವರು ಕಾರಣರಾಗಿದ್ದರು. ಟೈಮ್ ಪತ್ರಿಕೆಯು ಸ್ವಾಮಿನಾಥನ್ ಅವರನ್ನು ಮಹಾತ್ಮಾಗಾಂಧಿ ಹಾಗೂ ಠಾಗೂರ್ ಜೊತೆ ಸ್ವಾಮಿನಾಥನ್ ಅವರನ್ನು ಕೂಡಾ 20ನೇ ಶತಮಾನದ ಪ್ರಭಾವಿ ಏಶ್ಯನ್ನರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News