ಬ್ರಿಜ್‌ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ | ಸೆ.23ರಿಂದ ವಿಚಾರಣೆ ಮುಂದುವರಿಸಲಿರುವ ದಿಲ್ಲಿ ನ್ಯಾಯಾಲಯ

Update: 2024-09-12 15:00 GMT

ಬ್ರಿಜ್‌ ಭೂಷಣ್ ಸಿಂಗ್ |  PC : PTI 

ಹೊಸದಿಲ್ಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಸಿಂಗ್ ಪ್ರಕರಣದ ವಿಚಾರಣೆಯನ್ನು ದಿಲ್ಲಿ ನ್ಯಾಯಾಲಯ ಸೆಪ್ಟೆಂಬರ್ 23ರಿಂದ ಮುಂದುವರಿಸುವ ಸಾಧ್ಯತೆಯಿದೆ ಎಂದು ಪಿಟಿಐ ಸುದ್ದಿ ಸಂಸ್ತೆ ವರದಿ ಮಾಡಿದೆ.

ಗುರುವಾರ ಓರ್ವ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದ್ದ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಿಯಾಂಕ ರಜಪೂತ್, ದೂರುದಾರರು ನ್ಯಾಯಾಲಯಕ್ಕೆ ಹಾಜರಾಗದೆ ಇದ್ದುದರಿಂದ ವಿಚಾರಣೆಯನ್ನು ಮುಂದೂಡಿದರು.

ಬಿಜೆಪಿಯ ಮಾಜಿ ಸಂಸದ ಹಾಗೂ ಮಾಜಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಪ್ರಕರಣದಲ್ಲಿ ಸಾಕಷ್ಟು ಸಾಕ್ಷ್ಯಾಧಾರಗಳಿರುವುದರಿಂದ, ಅವರ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಇನ್ನಿತರ ದೋಷಾರೋಪಗಳನ್ನು ನಿಗದಿಗೊಳಿಸುವಂತೆ ಮೇ 10ರಂದು ನ್ಯಾಯಾಲಯ ಆದೇಶಿಸಿತ್ತು.

ಆರು ಬಾರಿ ಸಂಸದರಾಗಿದ್ದ ಬ್ರಿಜ್‌ ಭೂಷಣ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354ಎ ಹಾಗೂ 506ರ ಅಡಿ ದೋಷಾರೋಪ ನಿಗದಿಪಡಿಸುವಂತೆ ನ್ಯಾಯಾಲಯವು ನಿರ್ದೇಶನ ನೀಡಿತ್ತು.

ಆದರೆ, ನಾನು ದೋಷಿಯಲ್ಲ ಎಂದು ಸಿಂಗ್ ವಾದಿಸಿದ ನಂತರ, ನ್ಯಾಯಾಧೀಶರು ಅವರ ವಿರುದ್ಧದ ದೋಷಾರೋಪಗಳನ್ನು ನಿಗದಿಗೊಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News