BRS ನಾಯಕಿ ಕವಿತಾಗೆ 14 ದಿನ ಜೈಲು; ಎಪ್ರಿಲ್ 1ರಂದು ಜಾಮೀನು ಅರ್ಜಿ ವಿಚಾರಣೆ

Update: 2024-03-26 09:10 GMT

ಕೆ.ಕವಿತಾ | Photo: PTI  

ಹೊಸದಿಲ್ಲಿ: ಭಾರತ ರಾಷ್ಟ್ರ ಸಮಿತಿ (BRS) ನಾಯಕಿ ಕೆ.ಕವಿತಾ ಅವರ ಜೈಲು ಅವಧಿಯನ್ನು ದೆಹಲಿ ನ್ಯಾಯಾಲಯ ಏಪ್ರಿಲ್ 9ರವರೆಗೆ ವಿಸ್ತರಿಸಿದೆ.

ಮದ್ಯ ನೀತಿ ಹಗರಣದಲ್ಲಿ ಷಾಮೀಲಾದ ಆರೋಪದಲ್ಲಿ ಮಾರ್ಚ್ 15ರಂದು ಕಾನೂನು ಜಾರಿ ನಿರ್ದೇಶನಾಲಯ ಕೆ.ಕವಿತಾ ಅವರನ್ನು ಬಂಧಿಸಿತ್ತು. ಆಮ್ ಆದ್ಮಿ ಸರ್ಕಾರದ ಈ ಹಗರಣದ ಸಂಬಂಧ ಬಂಧಿತರಾಗಿದ್ದ ಕವಿತಾ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಲಾಗಿತ್ತು. ಕಳೆದ ವಾರ ಇದನ್ನು ಒಂದು ಬಾರಿ ವಿಸ್ತರಿಸಲಾಗಿತ್ತು. ಈ ಮೂಲಕ ಅವರ ಮೊಬೈಲ್ ಫೋನ್‍ನ ಮಾಹಿತಿಗಳನ್ನು ಪಡೆದಿರುವ ಬಗ್ಗೆ ಅವರು ತಗಾದೆ ತೆಗೆದಿದ್ದರು.

ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಇಂದು ಕಾನೂನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕೋರಿದರು. ಇದರಿಂದಾಗಿ ಕವಿತಾ ಅವರನ್ನು ಏಜೆನ್ಸಿಯ ಲಾಕಪ್ ಬದಲಾಗಿ ದೆಹಲಿಯ ತಿಹಾರ್ ಜೈಲಿಗೆ ಕಳುಹಿಸಲಾಗುವುದು.

ಕವಿತಾ ಅವರನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್‍ಗೆ ಒಯ್ಯುವ ಸಂದರ್ಭದಲ್ಲಿ ಬಿಆರ್ ಎಸ್ ನಾಯಕಿ ಅವರ ಟೀಕಾಕಾರರ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧದ ಪ್ರಕರಣ ಹಣ ದುರುಪಯೋಗದ ಪ್ರಕರಣವಲ್ಲ; ಬದಲಾಗಿ ರಾಜಕೀಯ ದುರುಪಯೋಗದ ಪ್ರಕರಣ ಎಂದರು. ತಮ್ಮ ವಿರುದ್ಧ ಆರೋಪ ಮಾಡಿದವರು ಆಡಳಿತಾರೂಢ ಬಿಜೆಪಿಗೆ ಸೇರಿದ್ದಾರೆ ಅಥವಾ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷಕ್ಕೆ ದೇಣಿಗೆ ನೀಡಿದ್ದಾರೆ ಎಂದು ಅವರು ಆಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News