ಉದ್ಯೋಗ, ಆರ್ಥಿಕ, ಕೃಷಿ ಸಮಸ್ಯೆ ಬಗ್ಗೆ ಬಜೆಟ್ ಪ್ರಸ್ತಾವಿಸಿಲ್ಲ: ವಿರೋಧ ಪಕ್ಷಗಳ ವಾಗ್ದಾಳಿ

Update: 2024-07-26 02:14 GMT

ಹೊಸದಿಲ್ಲಿ: ಆರ್ಥಿಕ, ಕೃಷಿ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಗುರುವಾರ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದವು. ಈ ಪ್ರಮುಖ ಸಮಸ್ಯೆಗಳ ಕುರಿತ ಆತಂಕವನ್ನು ಬಗೆಹರಿಸುವಲ್ಲಿ ಬಜೆಟ್ ಕೂಡಾ ವಿಫಲವಾಗಿದೆ ಎಂದು ವಿರೋಧಿ ಮುಖಂಡರು ಟೀಕಿಸಿದರು.

ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ತಿಂದುಹಾಕುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರ ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಬೇಕು ಎಂದು ಮಾಜಿ ಸಚಿವ ಕಪಿಲ್ ಸಿಬಲ್ ಅವರು ಆಗ್ರಹಿಸಿದರು. ಹೂಡಿಕೆದಾರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಧೀರ್ಘಾವಧಿ ಬಂಡವಾಳ ಲಾಭಕ್ಕೆ ಸಂಬAಧಿಸಿದAತೆ ಇಂಡೆಕ್ಸೇಷನ್ ಮರುಸ್ಥಾಪನೆ ಮಾಡುವಂತೆ ಆಮ್ ಆದ್ಮಿ ಪಕ್ಷದ ರಾಜೀವ್ ಛಡ್ಡಾ ಆಗ್ರಹಿಸಿದರು.

ಇಂಡೆಕ್ಸೇಷನ್ ಪ್ರಯೋಜನವನ್ನು ಕಿತ್ತುಹಾಕುವುದು ಹೂಡಿಕೆ ವಲಯದಲ್ಲಿ ಇಳಿಕೆಗೆ ಕಾರಣವಾಗಿ ರಿಯಲ್ ಎಸ್ಟೇಟ್ನಲ್ಲಿ ಕಪ್ಪುಹಣ ಹೂಡಿಕೆಗೆ ಕಾರಣವಾಗಲಿದೆ ಎಂದು ಪ್ರತಿಪಾದಿಸಿದರು. ಕಳೆದ 10 ವರ್ಷಗಳಲ್ಲಿ ಸರ್ಕಾರವು ಸಾರ್ವಜನಿಕರ ಆದಾಯದ ಶೇಕಡ 70 ರಿಂದ 80ರಷ್ಟು ಆದಾಯವನ್ನು ತೆರಿಗೆ ರೂಪದಲ್ಲಿ ಪಡೆದಿದ್ದು, ಇದಕ್ಕೆ ಪ್ರತಿಫಲವಾಗಿ ಏನನ್ನೂ ನೀಡಿಲ್ಲ ಎಂದು ಆಪಾದಿಸಿದರು.

2024-25ನೇ ಹಿಂಗಾರು ಹಂಗಾಮಿನಲ್ಲಿ "ಸಿ2 ಪ್ಲಸ್ 50%" ಸೂತ್ರದ ಆಧಾರದಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವಲ್ಲಿ ವಿಫಲವಾಗಿದ್ದು, ಈ ಮೂಲಕ ಕನಿಷ್ಠ ಬೆಂಬಲ ಬೆಲೆ ರೈತರ ಗರಿಷ್ಠ ನರಳಿಕೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News