ಹೊಸ ಅಪರಾಧ ಕಾನೂನು ಜಾರಿಗೆ ಮುನ್ನ ಒಮ್ಮತ ಮೂಡಿಸಿ: ನಿವೃತ್ತ ಉನ್ನತಾಧಿಕಾರಿಗಳಿಂದ ಕೇಂದ್ರ ಸರ್ಕಾರಕ್ಕೆ ಪತ್ರ
ಹೊಸದಿಲ್ಲಿ: ವಿವಿಧ ನಾಗರಿಕ ಸೇವೆಗಳಲ್ಲಿ ಕರ್ತವ್ಯ ನಿರ್ವಹಿಸಿದ 109 ಮಂದಿ ಉನ್ನತಾಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಮೂರು ಹೊಸ ಅಪರಾಧ ಕಾನೂನುಗಳ ಜಾರಿಯನ್ನು ಸದ್ಯಕ್ಕೆ ತಡೆ ಹಿಡಿಯುವಂತೆ ಮತ್ತು ಸರ್ವ ಪಕ್ಷಗಳ ಸಭೆಯಲ್ಲಿ ಅದನ್ನು ಪರಾಮರ್ಶಿಸುವಂತೆ ಸಲಹೆ ಮಾಡಿದ್ದಾರೆ.
ಜೂನ್ 16ರಂದು ಕಾನೂನು ಮತ್ತು ನ್ಯಾಯ ಖಾತೆಯ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಹೇಳಿಕೆ ನೀಡಿ, ನ್ಯಾಯಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ಜುಲೈ 1 ರಿಂದ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದರು.
ಭಾರತೀಯ ದಂಡಸಂಹಿತೆ, ಅಪರಾಧ ಪ್ರಕ್ರಿಯೆ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾನೂನುಗಳ ಬದಲು ಈ ನೂತನ ಕಾನೂನುಗಳು ಜಾರಿಗೆ ಬರಲಿವೆ. ವಿವಿಧ ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಮಸೂದೆಗಳನ್ನು ಆಂಗೀಕರಿಸಲಾಗಿತ್ತು.
ಡಿಸೆಂಬರ್ 13ರಂದು ಮಸೂದೆಯ ಬಗ್ಗೆ ಚರ್ಚೆಗೆ ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಲೋಕಸಭೆಯ ನೂರು ಮಂದಿ ಸಂಸದರು ಮತ್ತು ರಾಜ್ಯಸಭೆಯ 46 ಮಂದಿಯನ್ನು ಅಮಾನತುಗೊಳಿಸಿದ ಸಂದರ್ಭದಲ್ಲಿ ಮಸೂದೆ ಆಂಗೀಕರಿಸಲಾಗಿತ್ತು.
ಮಸೂದೆಯ ಹಂತದಲ್ಲಿ ವಿಮರ್ಶೆ ಮತ್ತು ಪ್ರಶ್ನೆಗಳಿಗೆ ಅವಕಾಶ ನೀಡದೇ ಇದಕ್ಕೆ ಸಂಸತ್ತಿನ ಆಂಗೀಕಾರ ಸಿಕ್ಕಿದೆ ಎಂದು ಶುಕ್ರವಾರ ಬರೆದ ಪತ್ರದಲ್ಲಿ ಈ ಅಧಿಕಾರಿಗಳು ವಿವರಿಸಿದ್ದಾರೆ. ಇದರ ಪರಿಣಾಮವಾಗಿ ಕಾನೂನು ಬಗೆಗಿನ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಪ್ರತಿಪಾದಿಸಿದ್ದಾರೆ.