"ಭದ್ರತಾ ಸಿಬ್ಬಂದಿಯನ್ನು ಕರೆಯಿರಿ, ಇವರನ್ನು ಹೊರ ಹಾಕಿ": ನೀಟ್ ವಿಚಾರಣೆ ವೇಳೆ ವಕೀಲರ ವಿರುದ್ಧ ಆಕ್ರೋಶ ಹೊರಹಾಕಿದ ಸಿಜೆಐ

Update: 2024-07-23 18:09 GMT

ಮ್ಯಾಥ್ಯೂಸ್ ನೆಡುಂಪರ ,  ಡಿ.ವೈ.ಚಂದ್ರಚೂಡ್  | PC: PTI

ಹೊಸದಿಲ್ಲಿ: ವಿಚಾರಣೆಗೆ ಅಡಚಣೆಯುಂಟು ಮಾಡಿದ್ದಾರೆಂದು ಹಿರಿಯ ವಕೀಲ ಮ್ಯಾಥ್ಯೂಸ್ ನೆಡುಂಪರ ಮೇಲೆ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹರಿಹಾಯ್ದ ಘಟನೆ ನೀಟ್-ಯುಜಿ ಪರೀಕ್ಷೆ ವಿಚಾರಣೆಯ ಸಂದರ್ಭದಲ್ಲಿ ಇಂದು ನಡೆದಿದೆ.

ಅರ್ಜಿದಾರರೊಬ್ಬರನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ನರೇಂದರ್ ಹೂಡಾ ವಾದ ಮಾಡುವಾಗ, ನೆಡುಂಪರ ಮಧ್ಯಪ್ರವೇಶಿಸಿದ್ದರಿಂದ ಸಿಜೆಐ ಡಿ.ವೈ.ಚಂದ್ರಚೂಡ್ ಆಕ್ರೋಶಗೊಂಡರು.

ಹೂಡಾ ವಾದ ಮಾಡುವಾಗ, "ನನಗೆ ಏನನ್ನೋ ಹೇಳುವುದಿದೆ" ಎಂದು ನೆಡುಂಪುರ ಅಡಚಣೆಯುಂಟು ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, "ಹೂಡಾ ವಾದ ಮುಗಿದ ನಂತರ ನೀವು ಮಾತನಾಡಿ" ಎಂದು ಸೂಚಿಸಿದರು.

ಮುಖ್ಯ ನ್ಯಾಯಮೂರ್ತಿಗಳ ಮಾತಿಗೆ ತಿರುಗೇಟು ನೀಡಿದ ನೆಡುಂಪರ, ನಾನಿಲ್ಲಿ ಅತ್ಯಂತ ಹಿರಿಯ ವಕೀಲ ಎಂದು ಪ್ರತ್ಯುತ್ತರ ನೀಡಿದರು.

ಇದರಿಂದ ಮತ್ತಷ್ಟು ಕೆರಳಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್, "ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ. ನೀವು ಮಧ್ಯ ಮಾತನಾಡಲು ಸಾಧ್ಯವಿಲ್ಲ. ನಾನು ಈ ನ್ಯಾಯಾಲಯದ ಉಸ್ತುವಾರಿಯಾಗಿದ್ದೇನೆ. ಭದ್ರತಾ ಸಿಬ್ಬಂದಿಯನ್ನು ಕರೆಯಿರಿ, ಇವರನ್ನು ಇಲ್ಲಿಂದ ಹೊರ ಹಾಕಿ" ಎಂದು ಆಕ್ರೋಶ ಹೊರಹಾಕಿದರು.

"ನೀವದನ್ನು ಹೇಳುವ ಅಗತ್ಯವಿಲ್ಲ, ನಾನು ನ್ಯಾಯಾಲಯದಿಂದ ತೆರಳುತ್ತೇನೆ" ಎಂದು ನೆಡುಂಪುರ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, "ನೀವು ಹೀಗೆ ಮಾತನಾಡುವ ಅಗತ್ಯವಿಲ್ಲ. ನೀವು ತೆರಳಬಹುದು. ನಾನು ಕಳೆದ 24 ವರ್ಷಗಳಿಂದ ನ್ಯಾಯಾಂಗವನ್ನು ನೋಡುತ್ತಿದ್ದೇನೆ. ಈ ನ್ಯಾಯಾಲಯದಲ್ಲಿ ವಕೀಲರು ನಿಯಮಗಳ ಕುರಿತು ಸೂಚನೆ ನೀಡಲು ನಾನು ಅವಕಾಶ ನೀಡಲಾಗುವುದಿಲ್ಲ" ಎಂದು ತಿರುಗೇಟು ನೀಡಿದರು.

ಆಗ ಮತ್ತೆ ಮಧ್ಯಪ್ರವೇಶಿಸಿದ ನೆಡುಂಪರ, "ನಾನು ನ್ಯಾಯಾಂಗವನ್ನು 1979ರಿಂದಲೂ ನೋಡುತ್ತಿದ್ದೇನೆ" ಎಂದು ವ್ಯಂಗ್ಯವಾಗಿ ಹೇಳಿದರು.

ನೀವೇನಾದರೂ ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದರೆ, ನಾನು ನಿಮ್ಮ ವಿರುದ್ಧ ನಿರ್ದೇಶನವೊಂದನ್ನು ಬಿಡುಗಡೆ ಮಾಡಬೇಕಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಮತ್ತೆ ಎಚ್ಚರಿಸಿದರು.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹಾಗೂ ವಕೀಲ ಮ್ಯಾಥ್ಯೂಸ್ ನೆಡುಂಪರ ನಡುವೆ ಸುಪ್ರೀಂಕೋರ್ಟ್‌ನಲ್ಲಿ ವಾಗ್ವಾದ ನಡೆದಿರುವುದು ಇದೇ ಮೊದಲಲ್ಲ. ಈ ವರ್ಷದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ಚುನಾವಣಾ ಬಾಂಡ್ ವಿಚಾರಣೆಯ ಸಂದರ್ಭದಲ್ಲೂ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಎಚ್ಚರಿಕೆ ನೀಡಿದರೂ, ನೆಡುಂಪರ ವಿಚಾರಣೆಗೆ ಅಡ್ಡಿಯುಂಟು ಮಾಡಿದ್ದರು.

ವಿವಾದಾತ್ಮಕ ವಕೀಲ ಎಂದೇ ಕುಖ್ಯಾತರಾಗಿರುವ ಮ್ಯಾಥ್ಯೂಸ್ ನೆಡುಂಪರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಲ್ಲಿ 2019ರಲ್ಲಿ ಸುಪ್ರೀಂಕೋರ್ಟ್ ಮೂರು ತಿಂಗಳ ಸೆರೆವಾಸದ ಶಿಕ್ಷೆಯನ್ನೂ ವಿಧಿಸಿತ್ತು. ಆದರೆ, ಮ್ಯಾಥ್ಯೂಸ್ ನೆಡುಂಪರ ಬೇಷರತ್ ಕ್ಷಮೆ ಕೋರಿದ್ದರಿಂದ, ಆ ಶಿಕ್ಷೆಯನ್ನು ಅಮಾನತಿನಲ್ಲಿರಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News