ವೈಮನಸ್ಸು ಹೊಂದಿದ ದಂಪತಿಗಳು ಪರಸ್ಪರ ʼಭೂತʼ, ʼಪಿಶಾಚಿʼ ಎಂದು ನಿಂದಿಸುವುದು ಕ್ರೌರ್ಯವಾಗದು: ಹೈಕೋರ್ಟ್
ಪಾಟ್ನಾ: ವೈಮನಸ್ಸು ಹೊಂದಿರುವ ದಂಪತಿಗಳು ಪರಸ್ಪರರಿಗೆ ʼಭೂತʼ, ʼಪಿಶಾಚಿʼ ಎಂಬ ಬೈಗುಳದ ಪದಗಳನ್ನು ಪ್ರಯೋಗಿಸುವುದು “ಕ್ರೌರ್ಯ” ಎಂದೆನಿಸದು ಎಂದು ಪಾಟ್ನಾ ಹೈಕೋರ್ಟ್ ಹೇಳಿದೆ.
ಬೊಕಾರೋದ ಸಹದಿಯೋ ಗುಪ್ತಾ ಮತ್ತವರ ಪುತ್ರ ನರೇಶ್ ಕುಮಾರ್ ಗುಪ್ತಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಜಸ್ಟಿಸ್ ಬಿಬೇಕ್ ಚೌಧುರಿ ಅವರ ಏಕ ಸದಸ್ಯ ಪೀಠ ಮೇಲಿನಂತೆ ಹೇಳಿದೆ.
ನರೇಶ್ ಗುಪ್ತಾ ಅವರ ವಿಚ್ಛೇದಿತ ಪತ್ನಿ ಬಿಹಾರದ ನಲಂದಾ ಜಿಲ್ಲೆಯ ನ್ಯಾಯಾಲಯದಲ್ಲಿ ದಾಖಲಿಸಿದ ದೂರಿನ ಆಧಾರದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ಅವರು ಪ್ರಶ್ನಿಸಿದ್ದರು.
ವರದಕ್ಷಿಣೆಯಾಗಿ ಕಾರು ನೀಡಬೇಕು ಎಂದು ಕೋರಿ ಪತಿ ಮತ್ತು ಮಾವ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ಧಾರೆಂದು ಆರೋಪಿಸಿ ಮಹಿಳೆ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅಪ್ಪ-ಮಗ ಇಬ್ಬರಿಗೂ ಶಿಕ್ಷೆಯಾಗಿತ್ತು. ಈ ನಡುವೆ ದಂಪತಿಗೆ ಜಾರ್ಖಂಡ್ ಹೈಕೋರ್ಟ್ ವಿಚ್ಛೇದನ ಮಂಜೂರು ಮಾಡಿತ್ತು.
ಅಪ್ಪ-ಮಗ ಪಾಟ್ನಾ ಹೈಕೋರ್ಟಿನಲ್ಲಿ ತಮಗೆ ಶಿಕ್ಷೆ ವಿಧಿಸಿದ್ದ ಕೆಳಹಂತದ ನ್ಯಾಯಾಲಯದ ತೀರ್ಪನ್ನು ಮಹಿಳೆ ಪ್ರಶ್ನಿಸಿ “21ನೇ ಶತಮಾನದಲ್ಲಿ ಮಹಿಳೆಯನ್ನು ಭೂತ, ಪಿಶಾಚಿ ಅಂತ ಗಂಡನ ಮನೆಯವರು ಕರೆದಿದ್ದಾರೆ, ಇದು ಅತಿಯಾದ ಕ್ರೌರ್ಯತೆ" ಎಂದು ವಾದಿಸಿದ್ದರು.
ನ್ಯಾಯಾಲಯ ಈ ವಾದವನ್ನು ತಿರಸ್ಕರಿಸಿ, ವೈಮನಸ್ಸು ಹೊಂದಿದ ದಂಪತಿಗಳು ಈ ರೀತಿ ನಿಂದಿಸುವ ಹಲವು ನಿದರ್ಶನಗಳಿವೆ. ಇದನ್ನು ಕ್ರೌರ್ಯತೆ ಎನ್ನಲಾಗದು, ಅಷ್ಟೇ ಅಲ್ಲದೆ ಆರೋಪಿಗಳು ತನಗೆ ಕಿರುಕುಳ ಹಿಂಸೆ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದರೂ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ ಎಂದು ಹೇಳಿದ ಹೈಕೋರ್ಟ್ ಕೆಳಹಂತದ ನ್ಯಾಯಾಲಯ ಅಪ್ಪ-ಮಗನ ವಿರುದ್ಧ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.