ಕೆನಡ ಭಾರತಕ್ಕೆ ಪುರಾವೆ ನೀಡಿಲ್ಲ ; ಭಾರತೀಯ ವಿದೇಶಾಂಗ ಸಚಿವಾಲಯ
ಹೊಸದಿಲ್ಲಿ : ಖಾಲಿಸ್ತಾನಿ ಉಗ್ರವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎನ್ನುವುದನ್ನು ಸೂಚಿಸುವ ಯಾವುದೇ ಪುರಾವೆಯನ್ನು ಕೆನಡ ಭಾರತಕ್ಕೆ ನೀಡಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.
‘‘ನಮಗೆ ನೀಡಲಾಗುವ ಯಾವುದೇ ನಿರ್ದಿಷ್ಟ ಮಾಹಿತಿಯನ್ನು ಪರಿಶೀಲಿಸಲು ನಾವು ಸಿದ್ಧರಿದ್ದೇವೆ, ಆದರೆ ಈವರೆಗೆ ನಮಗೆ ಕೆನಡವು ಯಾವುದೇ ನಿರ್ದಿಷ್ಟ ಮಾಹಿತಿಯನ್ನು ನೀಡಿಲ್ಲ’’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.
‘‘ಕೆನಡದಲ್ಲಿ ನೆಲೆಸಿರುವ ವ್ಯಕ್ತಿಗಳು ನಡೆಸುತ್ತಿರುವ ಕ್ರಿಮಿನಲ್ ಚಟುವಟಿಕೆಗಳ ಕುರಿತ ನಿರ್ದಿಷ್ಟ ಪುರಾವೆಯನ್ನು ನಾವು ಕೆನಡಕ್ಕೆ ನೀಡಿದ್ದೇವೆ. ಆದರೆ ಅದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ಅವರ ಆರೋಪಗಳು ರಾಜಕೀಯ ಪ್ರೇರಿತ ಎಂದು ನಮಗೆ ಅನಿಸುತ್ತದೆ’’ ಎಂದು ಬಾಗ್ಚಿ ಹೇಳಿದರು.
‘‘ರಾಜತಾಂತ್ರಿಕ ಉಪಸ್ಥಿತಿಯಲ್ಲಿ ಸಾಮ್ಯತೆಯನ್ನು ಹೊಂದುವಂತೆ ನಾವು ಕೆನಡ ಸರಕಾರಕ್ಕೆ ಸೂಚಿಸಿದ್ದೇವೆ. ಈಗ ಅವರ ರಾಜತಾಂತ್ರಿಕರ ಸಂಖ್ಯೆ ಹೆಚ್ಚಿದೆ. ಅದು ಕಡಿಮೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ’’ ಎಂದರು.
ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜಂಟ್ಗಳ ಕೈವಾಡವಿದೆ ಎಂದು ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಆರೋಪಿಸಿದ ಬಳಿಕ, ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ.