ಮೂರು ಗಂಟೆಗಿಂತ ಹೆಚ್ಚು ತಡವಾಗುವ ವಿಮಾನಗಳನ್ನು ರದ್ದುಗೊಳಿಸಿ: ವಿಮಾನ ಯಾನ ಸಂಸ್ಥೆಗಳಿಗೆ ಕೇಂದ್ರ ಸಚಿವ ಸೂಚನೆ
ಹೊಸದಿಲ್ಲಿ: ಗೋಚರತೆ ಸಮಸ್ಯೆಯಿಂದಾಗಿ ಭಾರಿ ವಿಳಂಬವಾಗುವ ಅಥವಾ ರದ್ದಾಗುವ ವಿಮಾನಗಳ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಿ ಎಂದು ವಿಮಾನ ಯಾನ ಸಂಸ್ಥೆಗಳನ್ನು ಒತ್ತಾಯಿಸಿದ ನಾಗರಿಕ ವಿಮಾನ ಯಾನ ಸಚಿವ ರಾಮ್ ಮೋಹನ್ ನಾಯ್ಡು, ಮೂರು ಗಂಟೆಗಿಂತ ಹೆಚ್ಚು ತಡವಾಗುವ ವಿಮಾನಗಳನ್ನು ರದ್ದುಗೊಳಿಸಿ ಎಂದು ಬುಧವಾರ ತಾಕೀತು ಮಾಡಿದ್ದಾರೆ. ಅಲ್ಲದೆ, ವಿಮಾನ ಯಾನ ಸಂಸ್ಥೆಗಳು ಪ್ರಯಾಣಿಕ ಕೇಂದ್ರಿತ ಧೋರಣೆ ಹಾಗೂ ಪ್ರಯಾಣಿಕರ ಸುರಕ್ಷತೆಯತ್ತ ಗಮನ ನೀಡಬೇಕಾದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
“ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯದ ಮಾರ್ಗಸೂಚಿಯನ್ವಯ CAT II/III ಮಾನದಂಡಕ್ಕೆ ಅನುಗುಣವಾದ ವಿಮಾನಗಳು ಹಾಗೂ ಪೈಲಟ್ ಗಳನ್ನು ದಿಲ್ಲಿ ಹಾಗೂ ಮಂಜಿನ ವಾತಾವರಣದಿಂದ ತೊಂದರೆಗೀಡಾಗಿರುವ ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗುವುದು ಎಂದು ಎಲ್ಲ ವಿಮಾನ ಯಾನ ಸಂಸ್ಥೆಗಳು ದೃಢಪಡಿಸಿವೆ. ದಿಲ್ಲಿ ವಿಮಾನ ನಿಲ್ದಾಣದಲ್ಲಿರುವ ನಾಲ್ಕು ರನ್ ವೇಗಳ ಪೈಕಿ ಮೂರು ರನ್ ವೇಗಳಲ್ಲಿ CAT III ILS ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ” ಎಂದು ಮಂಜು ಮುಸುಕಿದ ವಾತಾವರಣದ ಸನ್ನದ್ಧತೆ ಕುರಿತು ಆಯೋಜನೆಗೊಂಡಿದ್ದ ಉನ್ನತ ಮಟ್ಟದ ಪರಾಮರ್ಶೆ ಸಭೆಯಲ್ಲಿ ಪಾಲ್ಗೊಂಡ ನಂತರ, ನಾಗರಿಕ ವಿಮಾನ ಯಾನ ಸಚಿವರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿನ ವಾಯುಮಾಲಿನ್ಯದಿಂದಾಗಿ ಉಂಟಾಗಿರುವ ಕಳಪೆ ಗೋಚರತೆ ಪ್ರಮಾಣದಿಂದ ಸೋಮವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿನ ವಿಮಾನ ಕಾರ್ಯಾಚರಣೆ ವ್ಯತ್ಯಯಗೊಂಡ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಳಪೆ ಗೋಚರತೆ ಪರಿಸ್ಥಿತಿಯಿಂದಾಗಿ ದಿಲ್ಲಿ ವಿಮಾನ ನಿಲ್ದಾಣದಿಂದ 14 ವಿಮಾನಗಳ ಮಾರ್ಗವನ್ನು ಬದಲಿಸಲಾಗಿತ್ತು ಹಾಗೂ ಹಲವು ವಿಮಾನಗಳು ವಿಳಂಬಗೊಂಡಿದ್ದವು.