ವ್ಯಾಪಕ ವಿರೋಧದ ಬಳಿಕ ಉಲ್ಟಾ ಹೊಡೆದ ಕೇಂದ್ರ ಸರಕಾರ
ಹೊಸದಿಲ್ಲಿ: ಲ್ಯಾಟರಲ್ ಪ್ರವೇಶ ಕುರಿತ ಜಾಹೀರಾತನ್ನು ರದ್ದುಪಡಿಸುವಂತೆ ಸೂಚಿಸಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಇಂದು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್‌ಸಿ) ಪತ್ರ ಬರೆದಿದ್ದಾರೆ. ಈ ವಿಚಾರ ವ್ಯಾಪಕ ವಿವಾದಕ್ಕೀಡಾಗಿತ್ತು.
ಲ್ಯಾಟರಲ್ ಪ್ರವೇಶವು ಸಂವಿಧಾನದಲ್ಲಿ ಅಡಕವಾಗಿರುವ ಸಮಾನತೆ ಮತ್ತು ಸಾಮಾಜಿಕ ನ್ಯಾಯ ತತ್ವಗಳಿಗೆ, ಪ್ರಮುಖವಾಗಿ ಮೀಸಲಾತಿ ನಿಬಂಧನೆಗಳಿಗೆ ಅನುಸಾರವಾಗಿ ಇರುವಂತೆ ನೋಡಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಮೇಲಿನಂತೆ ತಿಳಿಸಲಾಗಿದೆ ಎಂದು ಸಚಿವರ ಪತ್ರದಲ್ಲಿ ಹೇಳಲಾಗಿದೆ.
ಕೇಂದ್ರ ಲೋಕಸೇವಾ ಆಯೋಗವು ಇತ್ತೀಚೆಗೆ ಜಾಹೀರಾತು ಪ್ರಕಟಿಸಿ ಕೇಂದ್ರ ಸರ್ಕಾರದ ವಿವಿಧ ಹಿರಿಯ ಹುದ್ದೆಗಳಿಗೆ ಲ್ಯಾಟರಲ್ ನೇಮಕಾತಿಗಾಗಿ ಪ್ರತಿಭಾವಂತ ಮತ್ತು ಸ್ಫೂರ್ತಿದಾಯಕ ಭಾರತೀಯ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಿ ಜಾಹೀರಾತು ಪ್ರಕಟಿಸಿತ್ತು. ಒಟ್ಟು 45 ಉನ್ನತ ಹುದ್ದೆಗಳಿಗೆ ನೇಮಕಾತಿಗಾಗಿ ಈ ಜಾಹೀರಾತು ನೀಡಲಾಗಿದ್ದು ಈ ಹುದ್ದೆಗಳಲ್ಲಿ ಕೇಂದ್ರದ 24 ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ನಿರ್ದೇಶಕರು ಮತ್ತು ಉಪ ಕಾರ್ಯದರ್ಶಿ ಹುದ್ದೆಗಳು ಸೇರಿವೆ.
ಈ ಜಾಹೀರಾತು, ಆಡಳಿತಾತ್ಮಕ ಮಟ್ಟದಲ್ಲಿ ಲ್ಯಾಟರಲ್ ಎಂಟ್ರಿ ಕುರಿತ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತಲ್ಲದೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದಲೂ ಟೀಕೆಗೆ ಗುರಿಯಾಗಿತ್ತು.