ಉ.ಪ್ರ:ದಲಿತ ಬಾಲಕಿಯ ಅತ್ಯಾಚಾರ, ಆಕೆಯ ತಂದೆಯ ಹತ್ಯೆ ಆರೋಪದಲ್ಲಿ ಬಿಜೆಪಿ ನಾಯಕನ ವಿರುದ್ಧ ಪ್ರಕರಣ
ಲಕ್ನೋ: ಮಹಾರಾಜಗಂಜ್ ಜಿಲ್ಲೆಯಲ್ಲಿ 17ರ ಹರೆಯದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಆಕೆಯ ತಂದೆಯ ಹತ್ಯೆಯ ಆರೋಪದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕನ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ.
ಅಪ್ರಾಪ್ತ ವಯಸ್ಕ ಬಾಲಕಿಯ ದೂರಿನ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಮಾಸೂಮ್ ರಝಾ ರಾಹಿ ಆ.28ರಂದು ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ರಕ್ಷಣೆಗಾಗಿ ತನ್ನ ತಂದೆ ಮಧ್ಯಪ್ರವೇಶಿಸಿದಾಗ ರಾಹಿ ಅವರನ್ನು ಥಳಿಸಿದ್ದು, ತೀವ್ರ ಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಆಕೆ ದೂರಿನಲ್ಲಿ ಆರೋಪಿಸಿದ್ದಾಳೆ.
ಬಾಲಕಿ ತನ್ನ ತಂದೆ, ಮೂವರು ಸೋದರಿಯರು ಮತ್ತು ಓರ್ವ ಸೋದರನೊಂದಿಗೆ ರಾಹಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಐಪಿಸಿ,ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಪೊಕ್ಸೊ ಕಾಯ್ದೆಯಡಿ ರಾಹಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಸದರ್ ಕೊತ್ವಾಲಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಜಯಸಿಂಗ್ ಚೌಹಾಣ ತಿಳಿಸಿದರು.
ಘಟನೆಯ ಕುರಿತು ಪಕ್ಷದ ಹಿರಿಯ ನಾಯಕತ್ವಕ್ಕೆ ಮಾಹಿತಿಯನ್ನು ನೀಡಲಾಗಿದ್ದು, ರಾಹಿ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬಿಜೆಪಿಯ ಜಿಲ್ಲಾ ಸಂಚಾಲಕ ಸಂಜಯ ಪಾಂಡೆ ತಿಳಿಸಿದರು.