ಜನರ ಕಲ್ಯಾಣ ಅಗತ್ಯಗಳನ್ನು ಪೂರೈಸುವಲ್ಲಿ ಇದು ಉಪಯುಕ್ತ: ಜಾತಿಗಣತಿಗೆ ಬೆಂಬಲ ವ್ಯಕ್ತಪಡಿಸಿದ ಆರೆಸ್ಸೆಸ್
ಹೊಸದಿಲ್ಲಿ: ಜಾತಿಗಣತಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿರುವ ಆರೆಸ್ಸೆಸ್, ಜನರ ಕಲ್ಯಾಣ ಅಗತ್ಯಗಳನ್ನು ಪೂರೈಸುವಲ್ಲಿ ಅದು ಉಪಯುಕ್ತವಾಗಿದೆ,ಆದರೆ ಚುನಾವಣಾ ಉದ್ದೇಶಗಳಿಗಾಗಿ ಅದನ್ನು ಬಳಸಬಾರದು ಎಂದು ಸೋಮವಾರ ಹೇಳಿದೆ.
‘ಸರಕಾರವು ದತ್ತಾಂಶ ಸಂಗ್ರಹ ಉದ್ದೇಶಕ್ಕಾಗಿ ಜಾತಿಗಣತಿಯನ್ನು ನಡೆಸಬೇಕು. ಜಾತಿ ಗಣತಿಯು ನಮ್ಮ ಸಮಾಜದಲ್ಲಿ ಸೂಕ್ಷ್ಮ ವಿಷಯವಾಗಿದ್ದು, ರಾಷ್ಟ್ರೀಯ ಏಕೀಕರಣಕ್ಕೆ ಅದು ಮುಖ್ಯವಾಗಿದೆ. ಆದರೆ ಜಾತಿಗಣತಿಯನ್ನು ಚುನಾವಣಾ ಪ್ರಚಾರಕ್ಕೆ ಮತ್ತು ಚುನಾವಣಾ ಉದ್ದೇಶಗಳಿಗೆ ಬಳಸಬಾರದು’ಎಂದು ಆರೆಸ್ಸೆಸ್‌ನ ಮುಖ್ಯ ವಕ್ತಾರ ಸುನಿಲ ಅಂಬೇಕರ್ ಹೇಳಿದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ವಿವಾದಗಳ ನಡುವೆಯೇ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದ ಆರೆಸ್ಸೆಸ್ ತಾನು ಅದಕ್ಕೆ ವಿರುದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಕೇರಳದ ಪಾಲಕ್ಕಾಡ್‌ನಲ್ಲಿ ಮೂರು ದಿನಗಳ ಆರೆಸ್ಸೆಸ್ ಸಮಾವೇಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂಬೇಕರ್, ‘ಇತ್ತೀಚಿಗೆ ಜಾತಿಗಣತಿಯ ಬಗ್ಗೆ ಮತ್ತೆ ಚರ್ಚೆ ಪ್ರಾರಂಭಗೊಂಡಿದೆ. ಅದನ್ನು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಬಳಸಬೇಕು ಮತ್ತು ಹಾಗೆ ಮಾಡುವಾಗ ಸಾಮಾಜಿಕ ಸಾಮರಸ್ಯ ಮತ್ತು ಸಮಗ್ರತೆಗೆ ಭಂಗವಾಗದಂತೆ ಸಮಾಜದ ಎಲ್ಲ ವರ್ಗಗಳು ನೋಡಿಕೊಳ್ಳಬೇಕು ಎಂದು ನಾವು ಭಾವಿಸಿದ್ದೇವೆ ’ ಎಂದರು.
ವಿದರ್ಭ ಪ್ರದೇಶದ ಆರೆಸ್ಸೆಸ್ ಪದಾಧಿಕಾರಿ ಶ್ರೀಧರ ಗಾಡ್ಗೆಯವರು ಜಾತಿಗಣತಿಯನ್ನು ಕೆಲವೇ ವ್ಯಕ್ತಿಗಳಿಗಾಗಿರುವ ‘ನಿಷ್ಫಲ ಕಸರತ್ತು’ ಎಂದು ಬಣ್ಣಿಸುವ ಮೂಲಕ ವಿವಾದವನ್ನು ಸೃಷ್ಟಿಸಿದ ಬಳಿಕ ಸಂಘದ ಈ ಸ್ಪಷ್ಟನೆ ಹೊರಬಿದ್ದಿದೆ.
ಜಾತಿ ಗಣತಿಯು ಜಾತಿವಾರು ಜನಸಂಖ್ಯೆಯನ್ನು ಪ್ರಮಾಣೀಕರಿಸುತ್ತದೆ, ಆದರೆ ಅದು ಸಮಾಜದ ಮತ್ತು ದೇಶದ ಹಿತಾಸಕ್ತಿಗೆ ಪೂರಕವಲ್ಲ ಎಂದು ಗಾಡ್ಗೆ ಹೇಳಿದ್ದರು.