ಐಐಟಿ-ದಿಲ್ಲಿಯಲ್ಲಿ ಆರಂಭಿಸಲಾದ ಜಾತಿ ತಾರತಮ್ಯ ಸಮೀಕ್ಷೆ ಕೆಲವೇ ಗಂಟೆಗಳಲ್ಲಿ ವಾಪಸ್
ಹೊಸದಿಲ್ಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ದಿಲ್ಲಿ, ತಾನು ಕ್ಯಾಂಪಸ್ಸಿನಲ್ಲಿ ನಡೆಸಲುದ್ದೇಶಿಸಿದ್ದ ಜಾತಿ ತಾರತಮ್ಯ ಸಮೀಕ್ಷೆಯನ್ನು ಅದನ್ನು ಆರಂಭಿಸಿದ ಕೆಲವೇ ಗಂಟೆಗಳಲ್ಲಿ ವಾಪಸ್ ಪಡೆದುಕೊಂಡಿದೆ. ಈ ಸಮೀಕ್ಷೆಯಲ್ಲಿ ಹಲವಾರು ಅನಗತ್ಯ ಮತ್ತು ಅಸಂವೇದಿತನದಿಂದ ಕೂಡ ಪ್ರಶ್ನೆಗಳಿದ್ದವು ಎಂದು ಹಲವು ವಿದ್ಯಾರ್ಥಿಗಳು ದೂರಿದ್ದಾರೆ.
ಕಳೆದ ಎರಡು ತಿಂಗಳು ಅವಧಿಯಲ್ಲಿ ಇಬ್ಬರು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಸಾವಿನ ನಂತರ ಸಂಸ್ಥೆಯ ಬೋರ್ಡ್ ಆಪ್ ಸ್ಟೂಡೆಂಟ್ ಪಬ್ಲಿಕೇಶನ್ಸ್ ಈ ಸಮೀಕ್ಷೆ ಅರಂಭಿಸಿತ್ತು. ಈ ಸಂಸ್ಥೆಯು ಐಐಟಿಯ ಅಧಿಕೃತ ವಿದ್ಯಾರ್ಥಿ ಪ್ರಕಾಶನ ಸಂಸ್ಥೆಯಾಗಿದೆ.
ಈ ತಿಂಗಳು ಸಂಸ್ಥೆಯ ಬಿಟೆಕ್ ಗಣಿತ ಮತ್ತು ಕಂಪ್ಯೂಟಿಂಗ್ ವಿಭಾಗದ ವಿದ್ಯಾರ್ಥಿ ಅನಿಲ್ ಕುಮಾರ್ ಆತ್ಮಹತ್ಯೆಗೈದಿದ್ದರೆ ಅದೇ ವಿಭಾಗದ ಇನ್ನೊಬ್ಬ ವಿದ್ಯಾರ್ಥಿ ಆಯುಷ್ ಆಶ್ನಾ ಜುಲೈ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈ ಘಟನೆಗಳ ಬಗ್ಗೆ ತನಿಖೆ ನಡೆಸಬೇಕೆಂಬ ಆಗ್ರಹ ವಿದ್ಯಾರ್ಥಿ ಸಮುದಾಯದಿಂದ ಕೇಳಿಬಂದಿತ್ತಲ್ಲದೆ ಗಣಿತ ಮತ್ತು ಕಂಪ್ಯೂಟಿಂಗ್ ವಿಭಾಗದಲ್ಲಿದೆಯೆನ್ನಲಾದ ಜಾತಿ ತಾರತಮ್ಯದ ಬಗ್ಗೆಯೂ ವಿಚಾರಣೆ ನಡೆಸಬೇಕೆಂದು ಆಗ್ರಹಿಸಲಾಗಿತ್ತು.
ಸಂಸ್ಥೆಯ ಮೀಸಲಾತಿ ನೀತಿಯನ್ನು ಈಗಿನ ರೀತಿಯಲ್ಲಿಯೇ ಮುಂದುವರಿಸಬೇಕೇ ಅಥವಾ ಆರ್ಥಿಕ ಮಾನದಂಡಗಳ ಆಧಾರದಲ್ಲಿ ಹೊಸ ನೀತಿ ಹೊಂದಬೇಕೇ, ಮೀಸಲಾತಿ ತೆಗೆದುಹಾಕಬೇಕೇ ಎಂಬ ಕುರಿತು ಪ್ರಶ್ನೆಯು ಸಮೀಕ್ಷೆಯಲ್ಲಿತ್ತು.
ಒಂದು ನಿರ್ದಿಷ್ಟ ವಿಧದ ಜಾತಿ ತಾರತಮ್ಯವನ್ನು ಎಷ್ಟು ಬಾರಿ ನೋಡಿದ್ದೀರಿ ಎಂಬ ಪ್ರಶ್ನೆಯೂ ಇತ್ತು.
ಕ್ಯಾಂಪಸ್ಸಿನಲ್ಲಿನ ಜಾತಿ-ಆಧಾರಿತ ತಾರತಮ್ಯದ ಬಗ್ಗೆ ತಿಳಿಯಲು ಸಮೀಕ್ಷೆ ಆರಂಭಿಸಲಾಗಿತ್ತು, ಆದರೆ ಸಂಸ್ಥೆಯ ಎಸ್‌ಸಿ/ಎಸ್‌ಟಿ ಘಟಕದ ದೂರುಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿದೆ.