ಪ್ರಕರಣವೊಂದರಿಂದ ಪಾರು ಮಾಡಲು 2.5 ಕೋಟಿ ರೂ. ಬೇಡಿಕೆ: NIA ಅಧಿಕಾರಿಯನ್ನು ಬಂಧಿಸಿದ ಸಿಬಿಐ ಪೊಲೀಸರು

Update: 2024-10-04 11:20 IST
ಪ್ರಕರಣವೊಂದರಿಂದ ಪಾರು ಮಾಡಲು 2.5 ಕೋಟಿ ರೂ. ಬೇಡಿಕೆ: NIA ಅಧಿಕಾರಿಯನ್ನು ಬಂಧಿಸಿದ ಸಿಬಿಐ ಪೊಲೀಸರು

ಸಾಂದರ್ಭಿಕ ಚಿತ್ರ (Credit: Meta AI)

  • whatsapp icon

ಹೊಸದಿಲ್ಲಿ: ಪ್ರಕರಣವೊಂದಕ್ಕೆ ಸಂಬಂಧಿಸಿ 20 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಲ್ಲಿ ಪಾಟ್ನಾದಲ್ಲಿ ನಿಯೋಜಿತವಾಗಿರುವ NIA ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಆತನ ಇಬ್ಬರು ಏಜೆಂಟ್ ಗಳನ್ನು ಬಂಧಿಸಿರುವ ಬಗ್ಗೆ ಸಿಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿರುವ ಆರೋಪದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿನ ಪ್ರಕರಣದಲ್ಲಿ ನನ್ನ ಕುಟುಂಬವನ್ನು ಸಿಲುಕಿಸುವುದಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪ್ರತಾಪ್ ಸಿಂಗ್ ಸುಳ್ಳು ಆರೋಪ ಮತ್ತು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ರಾಮಯ್ಯ ಕನ್ಸ್ಟ್ರಕ್ಸನ್ ಮಾಲಕ ರಾಕಿ ಯಾದವ್ ಸಿಬಿಐಗೆ ದೂರು ನೀಡಿದ್ದರು.

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಸೆ. 19ರಂದು ಯಾದವ್ ಅವರ ನಿವಾಸದಲ್ಲಿ ಶೋಧ ನಡೆಸಿತ್ತು. ಪ್ರಕರಣದ ತನಿಖಾಧಿಕಾರಿಯಾಗಿದ್ದ ಅಜಯ್ ಪ್ರತಾಪ್ ಸಿಂಗ್ ಸೆ. 26ರಂದು ವಿಚಾರಣೆಗೆ ಹಾಜರಾಗುವಂತೆ ಯಾದವ್ ಗೆ ಸೂಚಿಸಿದ್ದಾರೆ.

ಎನ್ಐಎ ಅಧಿಕಾರಿ ಅಜಯ್ ಪ್ರತಾಪ್ ಸಿಂಗ್ ಪ್ರಕರಣದಿಂದ ಪಾರು ಮಾಡಲು 2.5 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಸುಳ್ಳು ಆರೋಪಗಳಿಂದ ನನ್ನ ಕುಟುಂಬವನ್ನು ರಕ್ಷಿಸುವ ಸಲುವಾಗಿ ಅಧಿಕಾರಿಯ ಬೇಡಿಕೆಯನ್ನು ನಾನು ಒಪ್ಪಿಕೊಂಡಿದ್ದೆ ಎಂದು ಯಾದವ್ ಸಿಬಿಐ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಆರೋಪಿ ಉಪ ಪೊಲೀಸ್ ವರಿಷ್ಠಾಧಿಕಾರಿ ಸೆ.26 ರಂದು 25 ಲಕ್ಷ ರೂ. ನೀಡುವಂತೆ ಯಾದವ್ ಗೆ ಹೇಳಿದ್ದು, ಮಧ್ಯವರ್ತಿಯ ಮೊಬೈಲ್ ಸಂಖ್ಯೆಯನ್ನು ಹೊಂದಿರುವ ಕೈ ಬರಹದ ಚೀಟಿಯನ್ನು ಕೊಟ್ಟು ಮಧ್ಯವರ್ತಿಗೆ ಸಂಪರ್ಕಿಸುವಂತೆ ಸೂಚಿಸಿದ್ದಾರೆ. ಅದರಂತೆ ಹಣದ ವ್ಯವಸ್ಥೆ ಮಾಡಿ ಔರಂಗಾಬಾದ್ ನಲ್ಲಿ ಹಣ ನೀಡಲಾಗಿದೆ.

ಅ. 1ರಂದು ಸಿಂಗ್ ಮತ್ತೆ ಯಾದವ್ ಅವರಿಗೆ ಸಮನ್ಸ್ ನೀಡಿ ಕರೆಸಿದ್ದು, 70 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದಾರೆ. ಅದರಲ್ಲಿ ಅರ್ಧದಷ್ಟು ಹಣವನ್ನು ಅದೇ ದಿನ ನೀಡುವಂತೆ ಸೂಚಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ಅಜಯ್ ಪ್ರತಾಪ್ ಸಿಂಗ್ ಮತ್ತು ಅವರ ಇಬ್ಬರು ಏಜೆಂಟ್ ಗಳಾದ ಹಿಮಾಂಶು ಮತ್ತು ರಿತಿಕ್ ಕುಮಾರ್ ಸಿಂಗ್ ಅವರನ್ನು ಸಿಬಿಐ ಬಂಧಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News