2025ರಿಂದ ವರ್ಷದಲ್ಲಿ ಎರಡು ಬಾರಿ ಸಿಬಿಎಸ್‌ಇ ಪರೀಕ್ಷೆ | ಕಾರ್ಯವಿಧಾನ ರೂಪಿಸುವಂತೆ ಮಂಡಳಿಗೆ ಶಿಕ್ಷಣ ಸಚಿವಾಲಯ ಸೂಚನೆ
ಹೊಸದಿಲ್ಲಿ : 2025-26 ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಮಂಡಳಿ (ಬೋರ್ಡ್) ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸುವಂತೆ ಶಿಕ್ಷಣ ಸಚಿವಾಲವು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಗೆ ಸೂಚನೆ ನೀಡಿದೆ. ಆದರೆ ಸಿಬಿಎಸ್‌ಇಗೆ ಸೆಮಿಸ್ಟರ್ ವ್ಯವಸ್ಥೆಯನ್ನು ಜಾರಿಗೊಳಿಸುವ ಯೋಜನೆಯನ್ನು ಅದು ತಳ್ಳಿಹಾಕಿದೆ .
ವರ್ಷದಲ್ಲಿ ಎರಡು ಬಾರಿ ಮಂಡಳಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಮೇ ತಿಂಗಳಲ್ಲಿ ಸಿಬಿಎಸ್‌ಇ ಹಾಗೂ ಶಿಕ್ಷಣ ಸಚಿವಾಲಯವು ಜಂಟಿಯಾಗಿ ಶಾಲಾ ಪ್ರಾಂಶುಪಾಲರ ಜೊತೆ ಮಾತುಕತೆಗಳನ್ನು ನಡೆಸಲಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
ಪಪದವಿ ಶಿಕ್ಷಣ ಪ್ರವೇಶಾತಿಯ ವೇಳಾಪಟ್ಟಿಯ ಮೇಲೆ ಪರಿಣಾಮವಾಗದಂತೆ ಮಂಡಳಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಪೂರಕವಾಗುವ ರೀತಿಯಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಿಬಿಎಸ್‌ಇ ತೊಡಗಿದೆ ಎಂದು ಅವು ಹೇಳಿವೆ.
ಶಿಕ್ಷಣ ಸಚಿವಾಲಯವು ಕಳೆದ ವರ್ಷ ಘೋಷಿಸಿದ ನೂತನ ಪಠ್ಯಕ್ರಮ ಪ್ರಕಾರ, ಮಂಡಳಿ ಪರೀಕ್ಷೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯವಕಾಶ ಹಾಗೂ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸುವುದಕ್ಕೆ ಹಾಗೂ ಹೆಚ್ಚು ಅಂಕಗಳನ್ನು ಪಡೆಯಲು ಅವಕಾಶ ದೊರೆಯಲಿದೆ ಎಂದು ಶಿಕ್ಷಣ ಸಚಿವಾಲಯದ ಮೂಲಗಳು ತಿಳಿಸಿವೆ.