ಕೆಲಸ ಮಾಡದವರನ್ನು ‘ಸಾರ್ವಜನಿಕ ಹಿತಾಸಕ್ತಿ’ಯಲ್ಲಿ ನಿವೃತ್ತಿಗೊಳಿಸಲು ಸಚಿವಾಲಯಗಳಿಗೆ ಕೇಂದ್ರದ ಸೂಚನೆ

Update: 2024-06-29 12:10 GMT

ಸಾಂದರ್ಭಿಕ ಚಿತ್ರ (Credit: Meta AI)

ಹೊಸದಿಲ್ಲಿ,ಜೂ.29: ತನ್ನ ನಿರ್ದೇಶನಗಳನ್ನು ಪಾಲಿಸದಿರುವ ಬಗ್ಗೆ ಅಸಮಾಧಾನಗೊಂಡಿರುವ ಕೇಂದ್ರವು ಕೆಲಸ ಮಾಡದವರನ್ನು ಅವಧಿಗೆ ಮುನ್ನವೇ ನಿವೃತ್ತಿಗೊಳಿಸಲು ತಮ್ಮ ಸಿಬ್ಬಂದಿಗಳ ಕಾರ್ಯ ನಿರ್ವಹಣೆಯನ್ನು ಸಮಯೋಚಿತವಾಗಿ ಪುನರ್ಪರಿಶೀಲಿಸುವಂತೆ ಎಲ್ಲ ಸಚಿವಾಲಯಗಳಿಗೆ ಸೂಚಿಸಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯು ತನ್ನ ಆದೇಶದಲ್ಲಿ ಉದ್ಯೋಗಿಗಳ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸಲು ತಮ್ಮ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್ಯುಗಳು),ಬ್ಯಾಂಕುಗಳು,ಸ್ವಾಯತ್ತ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳಿಗೆ ನಿರ್ದೇಶನ ನೀಡುವಂತೆ ಸಂಬಂಧಿಸಿದ ಸಚಿವಾಲಯಗಳಿಗೆ ಸೂಚಿಸಿದೆ.

ಸಾರ್ವಜನಿಕ ಹಿತಾಸಕ್ತಿಯಲ್ಲಿ ಯಾವುದೇ ಸರಕಾರಿ ನೌಕರರನ್ನು ಸೇವೆಯಲ್ಲಿ ಉಳಿಸಿಕೊಳ್ಳಬೇಕೇ ಅಥವಾ ಅವಧಿಗೆ ಮುನ್ನವೇ ನಿವೃತ್ತಿಗೊಳಿಸಬೇಕೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅವರ ಕಾರ್ಯಕ್ಷಮತೆಯನ್ನು ನಿಯಮಿತವಾಗಿ ಪುನರ್ಪರಿಶೀಲಿಸುವಂತೆ ಆಗಾಗ್ಗೆ ಸೂಚನೆಗಳನ್ನು ನೀಡಲಾಗಿದೆ. ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಮತ್ತು ಡಿಒಪಿಟಿಗೆ ವರದಿಯನ್ನು ಸಲ್ಲಿಸುವಂತೆ ಆಡಳಿತಾತ್ಮಕ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಪದೇ ಪದೇ ಕೋರಿಕೊಳ್ಳಲಾಗಿದೆ ಎಂದು ಎಲ್ಲ ಕೇಂದ್ರ ಸರಕಾರಿ ಇಲಾಖೆಗಳ ಕಾರ್ಯದರ್ಶಿಗಳಿಗೆ ಹೊರಡಿಸಲಾಗಿರುವ ಆದೇಶದಲ್ಲಿ ತಿಳಿಸಲಾಗಿದೆ. ಆದರೂ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳು ಸದ್ರಿ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎನ್ನುವುದು ಗಮನಕ್ಕೆ ಬಂದಿದೆ. ಇದರ ಪರಿಣಾಮವಾಗಿ ಮೂಲಭೂತ ನಿಯಮಗಳು,ಕೇಂದ್ರ ಸರಕಾರಿ ಸೇವೆಗಳು(ಸಿಸಿಎಸ್) ಅಥವಾ ಸಿಸಿಎಸ್ ಪಿಂಚಣಿ ನಿಯಮಗಳ ನಿಬಂಧನೆಗಳಡಿ ಪುನರ್ಪರಿಶೀಲನೆಗೆ ಒಳಗಾಗಬೇಕಾದ ಸರಕಾರಿ ಉದ್ಯೋಗಿಗಳನ್ನು ಗುರುತಿಸುವಲ್ಲಿ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ನಿಬಂಧನೆಗಳಡಿ ಪುನರ್ಪರಿಶೀಲನೆಗೆ ಒಳಗಾಗಬೇಕಿರುವ ಉದ್ಯೋಗಿಗಳನ್ನು ಗುರುತಿಸಲು ತಕ್ಷಣ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ಪ್ರಸ್ತುತ ಸೂಚನೆಗಳಂತೆ ಅವರ ಪ್ರಕರಣಗಳನ್ನು ಪುನರ್ಪರಿಶೀಲನಾ ಸಮಿತಿಗೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಜೂ.27ರ ಆದೇಶದಲ್ಲಿ ಸಚಿವಾಲಯಗಳು/ಇಲಾಖೆಗಳಿಗೆ ಸೂಚಿಸಲಾಗಿದೆ.

2024 ಜುಲೈನಿಂದ ಪ್ರತಿ ತಿಂಗಳ 15ನೇ ದಿನಾಂಕದಂದು ನಿರ್ದಿಷ್ಟ ನಮೂನೆಯಲ್ಲಿ ವರದಿಯನ್ನು ಡಿಒಪಿಟಿಗೆ ಸಲ್ಲಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News