‘ಮೇಕ್ ಇನ್ ಇಂಡಿಯಾ’ ಸಾಕಾರಗೊಳಿಸಲು ಕೇಂದ್ರ ಸರಕಾರ ವಿಫಲ: ಮಲ್ಲಿಕಾರ್ಜುನ ಖರ್ಗೆ

Update: 2024-03-02 16:49 GMT

ಮಲ್ಲಿಕಾರ್ಜುನ ಖರ್ಗೆ | Photo: PTI 

ಹೊಸದಿಲ್ಲಿ: ‘ಮೇಕ್ ಇನ್ ಇಂಡಿಯಾ’ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸರಕಾರವನ್ನು ಶನಿವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಉದ್ಯೋಗ ಸೃಷ್ಟಿ ಹಾಗೂ ನಿಧಿಯನ್ನು ಬಳಸಿಕೊಳ್ಳುವಲ್ಲಿ ಸಂಪೂರ್ಣ ನಿಷ್ಕ್ರಿಯತೆಯಿಂದ ‘ಮೇಕ್ ಇನ್ ಇಂಡಿಯಾ’ವನ್ನು ಜಾರಿಗೊಳಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ಸರಕಾರ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸದಿರುವ ಹಾಗೂ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಪ್ರಮುಖ ವಲಯಗಳಲ್ಲಿ ನಿಧಿಯನ್ನು ಬಳಕೆ ಮಾಡದಿರುವ ಕುರಿತು ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ.

ಮೋದಿ ಸರಕಾರ ‘ಮೇಕ್ ಇನ್ ಇಂಡಿಯಾ’ವನ್ನು ಸಾಕಾರಗೊಳಿಸುವಲ್ಲಿ ವಿಫಲವಾಗಿದೆ! ಉತ್ಪಾದನ ವಲಯಗಳಿಗೆ ನೆರವು ನೀಡುವ ಕುರಿತು ಮೋದಿ ಸರಕಾರ ಸಾಕಷ್ಟು ಪ್ರಚಾರ ನಡೆಸಿದೆ. ಆದರೆ ಸಂಪೂರ್ಣ ನಿಷ್ಕ್ರಿಯತೆಯ ಕಾರಣದಿಂದ ‘ಮೇಕ್ ಇನ್ ಇಂಡಿಯಾ’ ವಿಫಲವಾಗಿದೆ ಎಂದು ಅವರು ‘ಎಕ್ಸ್’ನ ಪೋಸ್ಟ್ನಲ್ಲಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿಯಲ್ಲಿ ಸರಾಸರಿ ಉತ್ಪಾದನಾ ಬೆಳವಣಿಗೆ ಏಕೆ ಕುಸಿಯಿತು ಎಂದು ಅವರು ಪ್ರಶ್ನಿಸಿದ್ದಾರೆ. ಸರಾಸರಿ ಉತ್ಪಾದನಾ ಬೆಳವಣಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಅಡಿಯಲ್ಲಿ ಶೇ. 7.8 ಇತ್ತು. ಆದರೆ, ಈಗ ಅದು ಸರಿಸುಮಾರು ಶೇ. 6ಕ್ಕೆ ಕುಸಿದಿದೆ ಎಂದು ಅವರು ಹೇಳಿದರು.

2022ರ ಒಳಗೆ 10 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಕೇಂದ್ರ ಸರಕಾರ ನೀಡಿದ ಭರವಸೆಯನ್ನು ನೆನಪಿಸಿದ ಖರ್ಗೆ, ‘‘ಈ ಉದ್ಯೋಗಗಳು ಎಲ್ಲಿವೆ? ಉತ್ಪಾದನಾ ವಲಯದಲ್ಲಿ ಉದ್ಯೋಗಿಗಳ ಸಂಖ್ಯೆ ಕಳೆದ 10 ವರ್ಷಗಳಲ್ಲಿ ಕಡಿಮೆಯಾಗಿದೆ ಯಾಕೆ? ಬಹುತೇಕ ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್ಐ) ವಿಫಲವಾಗಿವೆ ಎಂಬುದು ಸತ್ಯವಲ್ಲವೇ? ಪ್ರಮುಖ ವಲಯಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನಿಧಿಗಳು ಬಳಕೆಯಾಗದೆ ಉಳಿದುಕೊಂಡಿವೆ ಯಾಕೆ? ಎಂದು ಅವರು ಪ್ರಶ್ನಿಸಿದರು. ಜವಳಿ ವಲಯದ ಪಿಎಲ್ಐ ಯೋಜನೆಯ ಶೇ. 96 ನಿಧಿ ಬಳಕೆಯಾಗದ ಉಳಿದುಕೊಂಡಿದೆ ಎಂದು ಅವರು ಆರೋಪಿಸಿದರು.

ಗಡಿ ಉಲ್ಲಂಘನೆಯ ಹೊರತಾಗಿಯೂ ಚೀನಾದಿಂದ ಆಮದು ಹೆಚ್ಚುತ್ತಿರುವ ಕುರಿತಂತೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ಗಲ್ವಾನದಲ್ಲಿ 20 ಯೋಧರು ಪ್ರಾಣ ತ್ಯಾಗ ಮಾಡಿದ ಬಳಿಕವೂ ಚೀನಾದಿಂದ ಆಮದು ಶೇ. 45 ಏರಿಕೆಯಾಗಿರುವುದು ಬಿಜೆಯ ನಕಲಿ ರಾಷ್ಟ್ರೀಯತೆ ಅಲ್ಲವೇ? ಎಂದು ಪ್ರಶ್ನಿಸಿದರು.

ಭಾರತಕ್ಕೆ ದೃಢವಾದ ಮತ್ತು ಎಲ್ಲರನ್ನೂ ಒಳಗೊಳ್ಳುವ ಉದ್ಯೋಗ ಸೃಷ್ಟಿಯ ಅಗತ್ಯವಿದೆ ಎಂದು ಖರ್ಗೆ ಪ್ರತಿಪಾದಿಸಿದರು. ಉದ್ಯೋಗ ಸೃಷ್ಟಿಸುವವರ ಸಾಮರ್ಥ್ಯಗಳನ್ನು ಉತ್ತೇಜಿಸುವ ಹಾಗೂ ಹೈಟೆಕ್ ನೆಟ್ವರ್ಕ್ಗಳ ಸಂಪರ್ಕದಿಂದ ಸಂಘಟಿತ ಉತ್ಪಾದನೆ ಮಾಡುವ ಅಗತ್ಯತೆ ಇದೆ ಎಂದು ಖರ್ಗೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News