ಮೌಲಾನ ಆಝಾದ್‌ ಎಜುಕೇಶನ್‌ ಫೌಂಡೇಶನ್‌ ಮುಚ್ಚಲು ಕೇಂದ್ರ ಸರಕಾರ ಆದೇಶ: ವರದಿ

Update: 2024-02-29 09:31 GMT

ಹೊಸದಿಲ್ಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಮೌಲಾನ ಆಜಾದ್‌ ಎಜುಕೇಶನ್‌ ಫೌಂಡೇಶನ್‌ ಮುಚ್ಚುಗಡೆಗೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ. ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ವಕ್ಫ್‌ ಮಂಡಳಿಯ ಪ್ರಸ್ತಾವನೆಯನ್ನಾಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು hindustantimes.com ವರದಿ ಮಾಡಿದೆ.

ಯಾವುದೇ ಸೂಕ್ತ ಕಾರಣ ನೀಡದೆ ಈ ಫೌಂಡೇಶನ್‌ ಮುಚ್ಚುಗಡೆಗೆ ಆದೇಶವನ್ನು ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯದ ಅಧೀನ ಕಾರ್ಯದರ್ಶಿ ಧೀರಜ್‌ ಕುಮಾರ್‌ ಫೆಬ್ರವರಿ 7ರಂದು ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದೊಂದು ಆಂತರಿಕ ವಿಚಾರ, ಆಂತರಿಕ ಚರ್ಚೆಗಳು ನಡೆಯುತ್ತಿವೆ ಆದೇಶವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಈ ಕುರಿತಂತೆ ಮಾರ್ಚ್‌ 4ರಂದು ಸಭೆ ನಡೆಯಲಿದೆ ಆದರೆ ಅಜೆಂಡಾ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಸಚಿವಾಲಯ ಹಾಗೂ ಕೇಂದ್ರ ವಕ್ಫ್‌ ಮಂಡಳಿ ಇನ್ನೂ ಪ್ರತಿಕ್ರಿಯಿಸಿಲ್ಲ.

ಸಚಿವಾಲಯವು ಫೌಂಡೇಶನ್‌ ಕಾನೂನಾತ್ಮಕ ಮುಚ್ಚುಗಡೆಗೆ ಪ್ರಸ್ತಾವಿಸಿ ಫೌಂಡೇಶನ್‌ ವಿಸರ್ಜಿಸುವ ಪ್ರಕ್ರಿಯೆಯನ್ನು ಅನ್ವಯವಾಗುವ ಕಾನೂನುಗಳಂತೆ ನಡೆಸಲಿದೆ ಎಂದು ಆದೇಶ ತಿಳಿಸುತ್ತದೆ ಎಂದು ಹೇಳಲಾಗಿದೆ.

ಈ ಆದೇಶ ಪ್ರಕಾರ ನವೆಂಬರ್‌ 30, 2023ರಲ್ಲಿದ್ದಂತೆ ಫೌಂಡೇಶನ್‌ ಬಳಿ ರೂ. 1,073.26 ಕೋಟಿ ನಿಧಿ ಇದ್ದು, ಬಾಧ್ಯತೆಗಳು ರೂ. 403,55 ಕೋಟಿ ಆಗಿವೆ ಹಾಗೂ ಈ ಮೊತ್ತ ಕಳೆದರೆ ಉಳಿಯುವ ಮೊತ್ತ ರೂ 669.71 ಕೋಟಿ ಆಗಿದೆ.

ಈ ನಿಧಿಯನ್ನು ಕನ್ಸಾಲಿಡೇಟೆಡ್‌ ಫಂಡ್ಸ್‌ ಆಫ್‌ ಇಂಡಿಯಾಗೆ ವರ್ಗಾಯಿಸುವ ಹಾಗೂ ಬಾಧ್ಯತೆಗಳನ್ನು ರಾಷ್ಟ್ರೀಯ ಅಲ್ಪಸಂಖ್ಯಾತ ಅಭಿವೃದ್ಧಿ ಮತ್ತು ಹಣಕಾಸು ಆಯೋಗಕ್ಕೆ ವರ್ಗಾಯಿಸುವ ಪ್ರಸ್ತಾಪವನ್ನು ಆದೇಶದಲ್ಲಿ ಮಾಡಲಾಗಿದೆ.

1989ರಲ್ಲಿ ಸ್ಥಾಪಿತವಾದ ಫೌಂಡೇಶನ್‌ ಸರಕಾರದಿಂದ ಅನುದಾನ ಪಡೆಯುವ ಸಂಸ್ಥೆಯಾಗಿದ್ದು ಮುಸ್ಲಿಂ ಸಮುದಾಯದ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದೆ.

ಸ್ವಾತಂತ್ರ್ಯ ಹೋರಾಟಗಾರ ಹಾಗೂ ದೇಶದ ಪ್ರಥಮ ಶಿಕ್ಷಣ ಸಚಿವ ಮೌಲಾನ ಅಬ್ದುಲ್‌ ಕಲಾಂ ಆಝಾದ್‌ ಅವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಈ ಫೌಂಡೇಶನ್‌ ಆರಂಭಿಸಲಾಗಿತ್ತು.

ಇಲ್ಲಿನ ಜೂನಿಯರ್‌ ರಿಸರ್ಚ್‌ ಫೆಲ್ಲೋಗಳಿಗೆ ಮೊದಲ ಎರಡು ವರ್ಷಗಳಿಗೆ ಮಾಸಿಕ ರೂ. 31,000 ಹಾಗೂ ಸೀನಿಯರ್‌ ರಿಸರ್ಚ್‌ ಫೆಲ್ಲೋಗಳಿಗೆ ಉಳಿದ ಅವಧಿಗೆ ಮಾಸಿಕ ರೂ. 35000 ನೀಡಲಾಗುತ್ತಿತ್ತು.

2021-22ರ ತನಕ ಮೌಲಾನ ಆಝಾದ್‌ ನ್ಯಾಷನಲ್‌ ಫೆಲೋಶಿಪ್‌ ಒಟ್ಟು 6700ಕ್ಕೂ ಅಧಿಕ ಅಭ್ಯರ್ಥಿಗಳಿಗೆ ರೂ 738.85 ಕೋಟಿ ಒದಗಿಸಿತ್ತು. ಆದರೆ ಈ ಯೋಜನೆಯನ್ನು 2022ರಲ್ಲಿ ಅಂತ್ಯಗೊಳಿಸಿದಾಗ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News